ಸಾರಾಂಶ
ಶಿಕ್ಷಣದಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಅನೇಕ ಒತ್ತಡಗಳು ಬರುತ್ತವೆ. ಮದುವೆ ಹಾಗೂ ಮುಂದಿನ ವಿದ್ಯಾಭ್ಯಾಸವನ್ನು ಏಕೆ ಮಾಡುತ್ತೀರಾ ಎಂಬ ಪ್ರಶ್ನೆಗಳು ಬರುವುದು ಸಾಮಾನ್ಯ. ಅವುಗಳನ್ನು ಬದಿಗೆ ಒತ್ತಿ ಜೀವನದಲ್ಲಿ ಸಾಧನೆಯತ್ತ ಮುಖ ಮಾಡಬೇಕು.
ಹಾವೇರಿ: ಪಾಲಕರು ಹಲವಾರು ಕಷ್ಟದ ನಡುವೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ ಸಾಧನೆಯೆಡೆಗೆ ಮುಖ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ತಿಳಿಸಿದರು.ನಗರದ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 2024- 2025ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಈಗಲೇ ನಿರ್ಧಾರ ಮಾಡಿಕೊಳ್ಳಬೇಕು.
ಶಿಕ್ಷಣದಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಅನೇಕ ಒತ್ತಡಗಳು ಬರುತ್ತವೆ. ಮದುವೆ ಹಾಗೂ ಮುಂದಿನ ವಿದ್ಯಾಭ್ಯಾಸವನ್ನು ಏಕೆ ಮಾಡುತ್ತೀರಾ ಎಂಬ ಪ್ರಶ್ನೆಗಳು ಬರುವುದು ಸಾಮಾನ್ಯ. ಅವುಗಳನ್ನು ಬದಿಗೆ ಒತ್ತಿ ಜೀವನದಲ್ಲಿ ಸಾಧನೆಯತ್ತ ಮುಖ ಮಾಡಬೇಕು. ನಾನು ಸಹ ಯುಪಿಎಸ್ಸಿ ಪರೀಕ್ಷೆ ಬರೆಯಬೇಕಾದರೆ 4 ಬಾರಿ ಅನುತೀರ್ಣವಾದರೂ ಪ್ರಯತ್ನ ಬಿಡದೇ 5ನೇ ಬಾರಿ ಯುಪಿಎಸ್ಸಿ ಉತ್ತೀರ್ಣ ಹೊಂದಿದೆ. ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಸಮಯಪ್ರಜ್ಞೆ ಇರಬೇಕು. ಸತತ ಪ್ರಯತ್ನ ಮಾಡಬೇಕು ಎಂದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದದ್ದು, 2024-2025ನೇ ಸಾಲಿನ ವಿದ್ಯಾರ್ಥಿಗಳು ನಮ್ಮ ವಿವಿಯ ಮೊದಲನೇ ಬ್ಯಾಚ್ ಆಗಿದ್ದು, ನಮ್ಮ ವಿವಿಯ ವಿದ್ಯಾರ್ಥಿಗಳೆಲ್ಲರೂ ಉನ್ನತ ಸ್ಥಾನದಲ್ಲಿದ್ದರೆ ನಮಗೆ ಅದುವೇ ಸಂತೋಷದ ವಿಷಯ ಎಂದರು.ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವೆ ರೇಣುಕಾ ಮೇಟಿ, ಜಿಮಖಾನ ವಿಭಾಗದ ಅಧ್ಯಕ್ಷೆ ಡಾ. ಕವಿತಾ ನಾಯಕ, ಉಪಾಧ್ಯಕ್ಷ ಡಾ. ರವೀಂದ್ರಕುಮಾರ ಬಣಕಾರ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.