ಮಕ್ಕಳ ಅಂಗವಿಕಲತೆ ನಿರ್ಮೂಲನೆ ಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿರಿ

ಕಾರಟಗಿ: ಪಟ್ಟಣದಲ್ಲಿ ಶನಿವಾರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಬಾಲಕಿಯರು ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗಳ ಸಹಯೋಗದಲ್ಲಿ ಶಾಲಾ ಮಕ್ಕಳಿಂದ ಶನಿವಾರ ಪಟ್ಟಣದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಜಾಗೃತಾ ಜಾಥಾ ನಡೆಯಿತು.

ಜಾಥಾವನ್ನು ಉದ್ದೇಶಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಿಕ್ಷಕ ಅಮರೇಶ ಮೈಲಾಪುರ, ಮಕ್ಕಳ ಅಂಗವಿಕಲತೆ ನಿರ್ಮೂಲನೆ ಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿರಿ. ಸರ್ಕಾರ ಪೋಲಿಯೋ ಮುಕ್ತ ಸಮಾಜವನ್ನಾಗಿಸಲು ಉಚಿತ ಪಲ್ಸ್ ಪೋಲಿಯೋ ಲಸಿಕೆಯನ್ನು ಡಿ. ೨೧ರಿಂದ ಹುಟ್ಟಿನಿಂದ ೫ ವರ್ಷದ ಮಕ್ಕಳಿಗೆ ಹಾಕಲಾಗುತ್ತದೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧೆಡೆ ಪೋಲಿಯೋ ಭೂತಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲದೆ ಇಲಾಖೆ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮನೆ ಮನೆಗೆ ತೆರಳಿ ಲಸಿಕೆ ಕೂಡ ಹಾಕುತ್ತಾರೆ ಆಗ ಎಲ್ಲರೂ ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿರಿ ಎಂದರು.

ಆರೋಗ್ಯ ಇಲಾಖೆಯ ಸಾವಿತ್ರಿ ಮಾತನಾಡಿ, ಜೀವದ ರಕ್ಷಾಕವಚ ಎರಡು ಹನಿ ಪಲ್ಸ್ ಪೋಲಿಯೋವನ್ನು ನವಜಾತ ಶಿಶು ಒಳಗೊಂಡಂತೆ ೫ ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಹಾಕಿಸಬೇಕು. ಡಿ.೨೧ರಿಂದ ಆರಂಭವಾಗಿ ಈ ಕಾರ್ಯಕ್ರಮದಲ್ಲಿ ೫ ವರ್ಷದೊಳಗಿನ ಯಾವುದೇ ಮಗು ಪಲ್ಸ್ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಕುರಿತು ಪಟ್ಟಣದೆಲ್ಲಡೆ ಜಾಗೃತಿ ಮೂಡಿಸಲಾಗುತ್ತಿದ್ದು ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಬಳಿಕ ನೌಕರರ ಸಂಘದ ಉಪಾಧ್ಯಕ್ಷ, ಶಿಕ್ಷಕ ಸಿಆರ್ ಪಿ ತಿಮ್ಮಣ್ಣ ನಾಯಕ, ಮುಖ್ಯ ಗುರು ಶ್ಯಾಮಸುಂದರ್ ಮಾತನಾಡಿ, ಮಕ್ಕಳ ಪೋಲಿಯೋ ಅಂಗವೈಫಲ್ಯ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದ್ದು ಪೊಷಕರಲ್ಲದೆ ಸಾರ್ವಜನಿಕರು ಅರಿವು ಮೂಡಿಸಿಕೊಂಡು ಪೋಷಕರು ತಮ್ಮ ಮಕ್ಕಳನ್ನು ಹತ್ತಿರದ ಪೋಲಿಯೋ ಲಸಿಕೆ ಭೂತಗಳಿಗೆ ಕರೆದೊಯ್ದು ಲಸಿಕೆಯನ್ನು ತಪ್ಪದೆ ಹಾಕಿಸಿ ಎಂದರು.

ಆರೋಗ್ಯ ಇಲಾಖೆ ಹಾಗೂ ಪಟ್ಟಣದ ಕ್ಲಸ್ಟರ್ ಸಂಪನ್ಮೂಲ ಕೇಂದ್ರ ಕಾರಟಗಿ-ಪಶ್ಚಿಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳ ಸಹಕಾರದೊಂದಿಗೆ ಪಲ್ಸ್ ಪೋಲಿಯೋ ಲಸಿಕಾ ಜಾಗೃತಾ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮುಖ್ಯಗುರು ರಾಮಣ್ಣ ಹಳ್ಳಿಕೇರಿ, ಶಿಕ್ಷಕಿಯರಾದ ಸುವರ್ಣ, ಶಾರದಮ್ಮ, ಪ್ರಮೀಳಾ ದೇವಿ, ಮಂಜುಳಾ ಆರೋಗ್ಯ ಇಲಾಖೆಯ ಸಾವಿತ್ರಿ ಹಾಗೂ ಆರೋಗ್ಯ ಸಹಾಯಕರು ಹಾಗೂ ಅತಿಥಿ ಶಿಕ್ಷಕರು ಭಾಗವಹಿಸಿದ್ದರು.