ಸಾರಾಂಶ
ಕಲಘಟಗಿ:
ಭಿನ್ನಾಭಿಪ್ರಾಯಗಳಿಗೆ ಆದ್ಯತೆ ನೀಡದೆ ಸಂಬಂಧಗಳ ಉಳಿವಿಗೆ ಮಹತ್ವ ನೀಡಬೇಕು ಎಂದು ನ್ಯಾಯಾಧೀಶ ರವೀಂದ್ರ ಹೊನೋಲೆ ಹೇಳಿದರು.ತಾಲೂಕಿನ ತಾವರಗೇರಿ ಗ್ರಾಮದ ಶ್ರೀಸಿದ್ಧಾರೂಢ ಮಠದ ಸಭಾಭವನದಲ್ಲಿ ಕಲಘಟಗಿ ಸಿದ್ಧಾರೂಢ ಸತ್ಸಂಗ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಬೀದರ ಚಿದಂಬರಾಶ್ರಮದ ಡಾ. ಶಿವಕುಮಾರ ಶ್ರೀಗಳ ೮೧ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಆಧುನಿಕತೆಯ ಪರಿಣಾಮ ಸಣ್ಣ ವಿಷಯಕ್ಕೂ ಸಂಬಂಧಗಳ ಮಧ್ಯೆ ಬಿರುಕು ಮೂಡುತ್ತಿವೆ. ಮನೆಯಲ್ಲೇ ಬಗೆಹರಿಯಬಹುದಾದ ಅನೇಕ ವಿಷಯಗಳು ಇಂದು ಕೋರ್ಟ್ ಮೆಟ್ಟಿಲೇರುತ್ತಿವೆ. ಸಣ್ಣ ಮನಸ್ತಾಪಗಳನ್ನು ಬದಿಗಿಟ್ಟು ಬಾಂಧವ್ಯ ವೃದ್ಧಿಯತ್ತ ಎಲ್ಲರೂ ಗಮನಹರಿಸಬೇಕು ಎಂದರು.
ಮೊಬೈಲ್ ಗೀಳಿಗೆ ಒಳಗಾಗಿ ಪ್ರೀತಿಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳಬಾರದು. ಅಪರಿಚಿತ ಯುವಕನ ಪ್ರೀತಿಯಲ್ಲಿ ಬೀಳುವ ಯುವತಿಯರು ಭವಿಷ್ಯ ಹಾಳು ಮಾಡಿಕೊಳ್ಳದೇ ತಂದೆ ತಾಯಿಯರ ಸಲಹೆಯನ್ನು ಪರಿಗಣಿಸಬೇಕು ಎಂದು ತಿಳಿ ಹೇಳಿದರು.ನ್ಯಾಯಾಧೀಶ ಗಣೇಶ ಎನ್. ಮಾತನಾಡಿ, ಭವ್ಯ ಭಾರತ ನಿರ್ಮಾಣಕ್ಕಾಗಿ ಸ್ವಾಮಿ ವಿವೇಕಾನಂದರು ಅನೇಕ ಸಂದೇಶಗಳನ್ನು ನೀಡಿದ್ದಾರೆ. ಇಂದಿನ ಯುವ ಪೀಳಿಗೆ ಅವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಧರ್ಮ ಮತ್ತು ಕಾನೂನಿನ ಅನ್ವಯ ಜೀವನ ನಡೆಸಬೇಕು. ಧರ್ಮ ಹಾಗೂ ಕಾನೂನು ಪಾಲಿಸದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ತಾವರಗೇರಿ ಸಿದ್ಧಾರೂಢ ಮಠದ ಪೀಠಾಧಿಪತಿ ನಿರ್ಗುಣಾನಂದ ಸ್ವಾಮೀಜಿ ಮಾತನಾಡಿ, ಸದ್ಗುರು ಸಿದ್ಧಾರೂಢರ ಜ್ಞಾನ ಕಂಡು ಸ್ವತಃ ಸ್ವಾಮಿ ವಿವೇಕಾನಂದರೇ ಬೆರಗಾಗಿದ್ದರು ಎಂದು ತಿಳಿಸಿದರು.ಇದೇ ವೇಳೆ ನೋಟರಿ ವಕೀಲರಾಗಿ ಆಯ್ಕೆಯಾದ ಕೆ.ಬಿ. ಗುಡಿಹಾಳ ಹಾಗೂ ಪತ್ರಕರ್ತ ಮಲ್ಲೇಶ ಮುಕ್ಕಣ್ಣವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಪ್ಪ ಅದರಗುಂಚಿ, ಗುರುನಾಥಗೌಡ ಬಸನಗೌಡ್ರ, ಶೇಖಯ್ಯ ನಡುವಿನಮನಿ, ಶಾಂತಮ್ಮ ಹಿರೇಮಠ, ನಾಗಮ್ಮ ಬಡಪ್ಪನವರ, ಬಸಪ್ಪ ಇಂದೂರ, ಬಸಮ್ಮ ಮುಗಳಿ, ಮಲ್ಲಮ್ಮ ಹುಲಿಕಟ್ಟಿ, ರುದ್ರಯ್ಯ ಹಿರೇಮಠ, ಬಸವಣ್ಣೆಪ್ಪ ಶಿವಪ್ಪ ಹೆಗ್ಗಣ್ಣವರ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು. ತೊಟ್ಟಿಲೋತ್ಸವ, ಉಡಿ ತುಂಬುವುದು ಸೇರಿದಂತೆ ಸಂಗೀತ ಕಾರ್ಯಕ್ರಮಗಳು ನೆರವೇರಿದವು.
ಕಲಘಟಗಿ ಸಿದ್ಧಾರೂಢ ಸತ್ಸಂಗ ಬಳಗದ ಡಾ. ಎಸ್.ಬಿ. ಹುಲಿಕಟ್ಟಿ, ಶಿಕ್ಷಕ ಬಿಜ್ಜೂರ, ಮಹಾದೇವಪ್ಪ ಲಕ್ಕಪನವರ, ಮೈಲಾರಿ ಸುಣಗಾರ, ಶಿಕ್ಷಕ ಪ್ರಭು ಗ್ಯಾನಪ್ಪನವರ, ಪರಶುರಾಮ ಪಾಣಿಗಟ್ಟಿ, ಸಿ.ಎಸ್. ಗ್ಯಾನಪ್ಪನವರ ಇದ್ದರು.