ಸರ್ಕಾರಿ ಕಚೇರಿಗಳಲ್ಲಿ ಲಂಚಕ್ಕೆ ಬೋರ್ಡ್‌ ಹಾಕಿ

| Published : Jun 23 2025, 11:47 PM IST

ಸಾರಾಂಶ

ಅಧಿಕಾರಿಗಳೇ ನೇರವಾಗಿ ಲಂಚ ಕೇಳುತ್ತಿದ್ದು, ತಮ್ಮ ಕಚೇರಿಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಇಂತಿಷ್ಟು ಲಂಚ ಕೊಡಬೇಕು ಎಂದು ಬೋರ್ಡ್ ಹಾಕಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಎಂಎಲ್‌ಸಿ ಚಿದಾನಂದಗೌಡ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಅಧಿಕಾರಿಗಳೇ ನೇರವಾಗಿ ಲಂಚ ಕೇಳುತ್ತಿದ್ದು, ತಮ್ಮ ಕಚೇರಿಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಇಂತಿಷ್ಟು ಲಂಚ ಕೊಡಬೇಕು ಎಂದು ಬೋರ್ಡ್ ಹಾಕಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಎಂಎಲ್‌ಸಿ ಚಿದಾನಂದಗೌಡ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಯಾವುದೇ ಸರ್ಕಾರಿ ಕಚೇರಿಗೆ ಹೋಗಿ ದಾಖಲೆ ಕೇಳಿದರೂ ಲಂಚ ಕೊಡಬೇಕಿದ್ದು, ಕಚೇರಿಗಳಲ್ಲಿ ಯಾರಿಗೆ ಎಷ್ಟು ಲಂಚ ಕೊಡಬೇಕು ಎಂಬ ವಿಚಾರವನ್ನು ಬೋರ್ಡ್‌ನಲ್ಲಿ ಹಾಕಿದರೆ ಒಳ್ಳೆಯದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ವಸತಿ ಸಚಿವ ಬಿ.ಝಡ್‌ ಜಮೀರ್‌ ಆಹ್ಮದ್ ಆಪ್ತ ಸಹಾಯಕ ಹಾಗೂ ಕಾಂಗ್ರೆಸ್‌ ಶಾಸಕ ಬಿ.ಆರ್.ಪಾಟೀಲ್‌ ಮಾತನಾಡಿರುವ ಆಡಿಯೋ ಲಭ್ಯವಿದ್ದು, ಸ್ವಪಕ್ಷದ ಶಾಸಕರಿಂದಲೇ ಮನೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವುದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಶ್ರೀಸಾಮಾನ್ಯರ ಜೀವ ಹಿಂಡುತ್ತಿದೆ ಎಂದರು.

ಈ ಪ್ರಕರಣದಿಂದ ಸರ್ಕಾರದ ಲೂಟಿಯ ಮುಖವಾಡ ಜಗಜ್ಜಾಹಿರಾಗಿದ್ದು, ಬಡವರು, ರೈತರು, ಸರ್ಕಾರದ ಸೌಲಭ್ಯ ಪಡೆಯಲು ಲಂಚ ಕೊಡಬೇಕಾದ ಅನಿರ್ವಾಯತೆಯನ್ನು ಸರ್ಕಾರವೇ ಅನಧಿಕೃತವಾಗಿ ನಿರ್ಮಿಸಿದೆ. ಬೆಂಗಳೂರಿನಲ್ಲಿ ಹೊಸದಾದ 2 ಲಕ್ಷದಷ್ಟು ಮನೆಗಳಿಗೆ ಅಕ್ಯೂಪೇಶನ್ ಪ್ರಮಾಣ ಪತ್ರ ನೀಡುವಂತೆ ಹೊಸ ಐಡಿಯಾ ಮಾಡಿರುವ ಸರ್ಕಾರ ಅದಕ್ಕಾಗಿ ಹಣ ನಿಗದಿಗೊಳಿಸಿ ಲಂಚ ಪಡೆಯುವ ಕೆಲಸಕ್ಕೆ ಕೈ ಹಾಕಿದೆ. ಈ ಪತ್ರ ಇಲ್ಲದಿದ್ದರೆ ವಿದ್ಯುತ್‌ ಸಂಪರ್ಕ ಕೊಡುತ್ತಿಲ್ಲ. ಇದೊಂದೇ ಪ್ರಕರಣವಲ್ಲ, ಕಟ್ಟಿರುವ ಮನೆ, ನಿವೇಶನಗಳಿಗೆ ನೀಡುವ ಎ ಖಾತೆ ಮತ್ತು ಬಿ ಖಾತೆ ,ಬಗರ್ ಹುಕುಂ ಜಮೀನಿನ ಸಾಗುವಳಿ ಚೀಟಿ ನೀಡುವಂತೆ ಮತ್ತು ಇತರೆ ದಾಖಲೆಗಳಿಗೆ ಲಂಚ ನೀಡದಿದ್ದರೆ ಕೆಲಸವಾಗಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ತನ್ನ ಕಾರ್ಯಕರ್ತರೊಡನೆ ಪ್ರತಿ ಗ್ರಾಪಂಗಳಿಗೆ ಮುತ್ತಿಗೆ ಹಾಕಲಿದ್ದು, ಅಲ್ಲಿನ ಲಂಚ ಬಾಕ ಅಧಿಕಾರಿಗಳಿಗೆ ಘೇರಾವ್‌ ಹಾಕುವ ಕೆಲಸವನ್ನು ಮಾಡುತ್ತೇವೆ. ಈ ಸರ್ಕಾರದ ಭ್ರಷ್ಟಾಚಾರವನ್ನು ಪ್ರತಿ ಮನೆಗೆ ತೆರಳಿ ಹೇಳುತ್ತೇವೆ. ರಾಜಕೀಯದಲ್ಲಿ ಪ್ರಾಮಾಣಿಕತೆ ತರುತ್ತೇವೆ ಎಂದರು.

ಸಿಎಂ ಸಿದ್ದರಾಮಯ್ಯ ಸರ್ಕಾರದ ಶಾಸಕರೇ ಇಂದು ಕಾಂಗ್ರೆಸ್ ಸರ್ಕಾರದ ಲಂಚಗುಳಿತನ ಹೊರಗೆಳೆದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತ ಜನ ಸ್ನೇಹಿಯಾಗಿ ಕೆಲಸ ಮಾಡಬೇಕು. ಜನರ ರಕ್ತ ಹೀರಬಾರದು. ಮಂತ್ರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದರೆ ಹೀಗೆ ಆಗುತ್ತದೆ. ಉದ್ಯಮಿ ಮೋಹನ್‌ ದಾಸ್ ಪೈ ಇತ್ತಿಚೆಗೆ ವಿಡಿಯೋದಲ್ಲಿ ಸರ್ಕಾರದ ಹಾಗೂ ಅಧಿಕಾರಿಗಳ ಲಂಚದ ಬಗ್ಗೆ ಹೇಳಿದ್ದು, ಶೇ. 40 ಕ್ಕಿಂತ ಹೆಚ್ಚಿನ ಲಂಚದ ಬೇಡಿಕೆ ಇಡುತ್ತಿದ್ದು, ಬಡಬಗ್ಗರ ಕೆಲಸವಾಗುತ್ತಿಲ್ಲ ,ಪ್ರತಿ ಸಹಿಗೂ ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಎಂದಿದ್ದಾರೆ. ಹೀಗಾದರೆ ಜನರ ಬದುಕನ್ನು ಬೀದಿಗೆ ತಳ್ಳಿದಂತೆಯೇ ಆದ್ದರಿಂದ ಲಂಚಗಳಿತನಕ್ಕೆ ಸಿಎಂ ಕಡಿವಾಣ ಹಾಕಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ವಾತಾವರಣವನ್ನು ಕಚೇರಿಗಳಲ್ಲಿ ನಿರ್ಮಾಣ ಮಾಡಬೇಕು. ಈ ವಿಚಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.