ಸಾರಾಂಶ
ಮುದ್ದು ಕೃಷ್ಣ, ಕಂದ ಕೃಷ್ಣ, ಕಿಶೋರ ಕೃಷ್ಣ, ತುಂಟ ಕೃಷ್ಣ.. ಹೀಗೆ ಕೃಷ್ಣನ ವಿವಿಧ ‘ಅವತಾರ’ಗಳಿಗೆ ಕದ್ರಿ ಕ್ಷೇತ್ರ ಸಾಕ್ಷಿಯಾಯಿತು. ದೇವಾಲಯ ಆವರಣದ ವಿವಿಧೆಡೆ 42 ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆ ನೋಡುಗರ ಮನಸೂರೆಗೊಳಿತು. ಊರು- ಪರವೂರುಗಳಿಂದ ಜನರು ತಮ್ಮ ‘ಮುದ್ದು ಕೃಷ್ಣ’ರೊಂದಿಗೆ ಆಗಮಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ತಲೆಯಲ್ಲಿ ನವಿಲುಗರಿ, ಕೈಯಲ್ಲಿ ಕೊಳಲು, ಬಾಯ್ತುಂಬಾ ಬೆಣ್ಣೆ!ನಗರದ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಸೋಮವಾರ ತರಹೇವಾರಿ ಕೃಷ್ಣ ದರ್ಶನ ಭಾಗ್ಯ. ಕಲ್ಕೂರ ಪ್ರತಿಷ್ಠಾನ ವತಿಯಿಂದ ರಾಷ್ಟ್ರೀಯ ಮಕ್ಕಳ ಉತ್ಸವ- ಶ್ರೀಕೃಷ್ಣ ವೇಷ ಸ್ಪರ್ಧೆ ಸೋಮವಾರ ವೈಭವದಿಂದ ನೆರವೇರಿತು.
ಮುದ್ದು ಕೃಷ್ಣ, ಕಂದ ಕೃಷ್ಣ, ಕಿಶೋರ ಕೃಷ್ಣ, ತುಂಟ ಕೃಷ್ಣ.. ಹೀಗೆ ಕೃಷ್ಣನ ವಿವಿಧ ‘ಅವತಾರ’ಗಳಿಗೆ ಕದ್ರಿ ಕ್ಷೇತ್ರ ಸಾಕ್ಷಿಯಾಯಿತು. ದೇವಾಲಯ ಆವರಣದ ವಿವಿಧೆಡೆ 42 ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆ ನೋಡುಗರ ಮನಸೂರೆಗೊಳಿತು. ಊರು- ಪರವೂರುಗಳಿಂದ ಜನರು ತಮ್ಮ ‘ಮುದ್ದು ಕೃಷ್ಣ’ರೊಂದಿಗೆ ಆಗಮಿಸಿದ್ದರು. ನೂರಾರು ಮಂದಿ ಪುಟಾಣಿ ಕೃಷ್ಣರ ತುಂಟಾಟ ನೋಡಲೆಂದೇ ಜನಜಾತ್ರೆ ಸೇರಿತ್ತು. ಬೆಳಗ್ಗಿನಿಂದ ರಾತ್ರಿವರೆಗೆ 9 ವೇದಿಕೆಗಳಲ್ಲಿ ಏಕಕಾಲದಲ್ಲಿ ಸ್ಪರ್ಧೆ ನಡೆಯಿತು. ರಾತ್ರಿ 12ಕ್ಕೆ ಅರ್ಘ್ಯ ಪ್ರದಾನ- ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.ಶ್ರೀಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ, ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣ ಮೇರು ಶಿಖರ. ಜೀವನವನ್ನು ಮನುಕುಲಕ್ಕೆ ಮಾದರಿಯಾಗಿ ಜೀವಿಸಿದ ದೇವರು ಎಂದು ಹೇಳಿದರು.
ಕಲ್ಕೂರ ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರತಿವರ್ಷ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾದುದು. ಶ್ರೀಕೃಷ್ಣ ದೇವರು ನಮ್ಮ ದೇಶವನ್ನು ಪ್ರಜ್ವಲಗೊಳಿಸಲಿ ಎಂದರು.ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೇನಾರಾಯಣ ಆಸ್ರಣ್ಣ ಮಾತನಾಡಿ, ಕೃಷ್ಣನ ಅವತಾರ ಧರ್ಮ ಸೂಕ್ಷ್ಮವನ್ನು ಬೋಧಿಸಿದ ಅವತಾರವಾಗಿದೆ. ಜಗತ್ತಿಗೆ ಧಾರ್ಮಿಕತೆಯ ತಿಳಿವಳಿಕೆಯನ್ನು ಕೃಷ್ಣ ನೀಡಿದ್ದಾನೆ. ಕೃಷ್ಣ ವೇಷ ಸ್ಪರ್ಧೆ ಭಾರತೀಯ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿದೆ ಎಂದರು.ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಮುಖರಾದ ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿ, ಎ.ಜೆ. ಶೆಟ್ಟಿ, ನಿತಿನ್ ಕುಮಾರ್, ರತ್ನಾಕರ ಜೈನ್, ಜಿ.ಕೆ. ಭಟ್ ಸೇರಾಜೆ, ಶಕೀಲಾ ಕಾವ, ಭುವನಾಭಿರಾಮ ಉಡುಪ, ವಿಜಯಲಕ್ಷ್ಮಿ ಶೆಟ್ಟಿ, ಮಂಜುಳಾ ಶೆಟ್ಟಿ, ಜ್ಯೂಲಿಯೆಟ್, ಜಯಮ್ಮ, ಸಮೀರ್ ಪುರಾಣಿಕ್ ಮತ್ತಿತರರು ಇದ್ದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.ಶ್ರೀಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯರು, ಪುಟಾಣಿ ಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ 20ಕ್ಕೂ ಅಧಿಕ ಹಸುಗೂಸುಗಳನ್ನು ತೊಟ್ಟಿಲಲ್ಲಿ ತೂಗುವ ಮೂಲಕ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಚಾಲನೆ ದೊರೆಯಿತು. ಅಮ್ಮಂದಿರು ಜೋಗುಳ ಹಾಡಿ ಮಕ್ಕಳನ್ನು ತೊಟ್ಟಿಲಿನಲ್ಲಿ ತೂಗಿದರು. ಬಳಿಕ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.