ಸಾರಾಂಶ
ನಾಡಿನ ಅಂಧ, ಅನಾಥರ ಪಾಲಿನ, ದೀನ-ದಲಿತರ ಆಶಾ ಕಿರಣವಾಗಿ, ಕಣ್ಣಿಲ್ಲದಿದ್ದರೂ ಕಣ್ಣಿದ್ದವರಿಗೂ ವಿಶೇಷ ಜ್ಞಾನದ ಕಣ್ಣು ನೀಡಿದ ಮಹಾತ್ಮರು ಪಂ. ಪಂಚಾಕ್ಷರಿ ಪುಟ್ಟರಾಜ ಗವಾಯಿಗಳು.
ಕೊಪ್ಪಳ:
ಪಂ. ಪಂಚಾಕ್ಷರಿ ಪುಟ್ಟರಾಜ ಗವಾಯಿಗಳು ತಮ್ಮ ಬದುಕನ್ನೇ ಸಂಗೀತ ಸೇವೆಗೆ ಮುಡುಪಾಗಿಟ್ಟಿದ್ದರು. ಅನೇಕ ಅಂಧರ ಬಾಳಿಗೆ ಬೆಳಕಾದವರು ಎಂದು ಪ್ರವಾಸೋದ್ಯಮ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಚಂದ್ರಕಲಾ ಎಸ್.ಎನ್. ಹೇಳಿದರು.ಸ್ವರ ಸೌರಭ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ನವದೆಹಲಿ ಸಹಯೋಗದಲ್ಲಿ ಭಾಗ್ಯನಗರದ ಪಟ್ಟಣ ಪಂಚಾಯಿತಿ ಹಿಂಭಾಗದ ಬಯಲು ರಂಗಮಂದಿರದಲ್ಲಿ ನಡೆದ ಪಂ. ಪುಟ್ಟರಾಜ ಸ್ವರ ನಮನ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಕಲ್ಲಯ್ಯಜ್ಜನವರು ಮಾತನಾಡಿ, ನಾಡಿನ ಅಂಧ, ಅನಾಥರ ಪಾಲಿನ, ದೀನ-ದಲಿತರ ಆಶಾ ಕಿರಣವಾಗಿ, ಕಣ್ಣಿಲ್ಲದಿದ್ದರೂ ಕಣ್ಣಿದ್ದವರಿಗೂ ವಿಶೇಷ ಜ್ಞಾನದ ಕಣ್ಣು ನೀಡಿದ ಮಹಾತ್ಮರು ಎಂದರು.ಸಂಸ್ಥೆಯ ಅಧ್ಯಕ್ಷ ವೀರಪ್ಪ ಶ್ಯಾವಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮನೋರಮ ಗೋವಿಂದರಾಜ, ಹೇಮಾವತಿ ಅಂಬಣ್ಣ, ಮಂಜುಳಾ ಮಂಜುನಾಥ, ಮಂಜುನಾಥ ಗೊಂಡಬಾಳ ಉಪಸ್ಥಿತರಿದ್ದರು.
ಗದಗಿನ ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠ ಶಾಲೆ ವಿದ್ಯಾರ್ಥಿಗಳಿಂದ ಪಂಚ ತಬಲಾ ವಾದನ, ಸ್ವರ ಸೌರಭ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಂಚ ಕೊಳಲು ವಾದನ, ಮಾರುತಿ ದೊಡ್ಡಮನಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಅನುರಾಗ ಗದ್ದಿ ಅವರಿಂದ ಕನ್ನಡ ಗಜಲ್ ಗಾಯನ, ಸೃಷ್ಟಿ ಸುರೇಶರಿಂದ ಸುಗಮ ಸಂಗೀತ, ವಿಜಯಲಕ್ಷ್ಮೀ ನಾಗರಾಜರಿಂದ ಭಾವಗೀತೆ, ಕೀರ್ತಿ ಮೇಟಿ ಹಾಗೂ ಆರತಿ ಮೇಟಿ ಅವರಿಂದ ಸಮೂಹ ಗೀತೆ ಹಾಗೂ ವಿದ್ವಾನ್ ಗೋಪಾಲ ಸಾಗರದವರಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ಸೊಗಸಾಗಿ ಮೂಡಿಬಂದವು. ಪಂಚಾಕ್ಷರಕುಮಾರ ಬೊಮ್ಮಲಾಪುರ ಅವರ ಭೈರವಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.