ಸಾರಾಂಶ
ಪುಟ್ಟರಾಜರು ಜನಿಸಿದ ಆರು ತಿಂಗಳಲ್ಲಿ ದೃಷ್ಟಿಹೀನರಾದರು. ಸಂಸ್ಕೃತ, ಹಿಂದಿ, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ಹೊಸಪೇಟೆ: ಅಂಧ, ಅನಾಥ ಮಕ್ಕಳನ್ನು ನನ್ನ ಉಡಿಗೆ ಹಾಕಿ, ನನಗಿನ್ನೇನು ಬೇಡ ಎಂದು ಡಾ. ಪುಟ್ಟರಾಜ ಗವಾಯಿಗಳು ಹೇಳಿದ್ದರು ಎಂದು ಸ್ನಾತಕೋತ್ತರ ವಿದ್ಯಾರ್ಥಿ ಪೂಜಾರಿ ದುರ್ಗೇಶ್ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ ಸ್ವರಸಂಚಾರ ವೇದಿಕೆಯಿಂದ ಏರ್ಪಡಿಸಿದ್ದ ಪಂ. ಪುಟ್ಟರಾಜ ಗವಾಯಿಗಳು ಹಾಗೂ ಡಾ. ಗಂಗೂಬಾಯಿ ಹಾನಗಲ್ ಅವರ ಜನ್ಮಶತಮಾನೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಮತ್ತು ಗಾಯನ ಕಾರ್ಯಕ್ರಮದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.ಪುಟ್ಟರಾಜರು ಜನಿಸಿದ ಆರು ತಿಂಗಳಲ್ಲಿ ದೃಷ್ಟಿಹೀನರಾದರು. ಸಂಸ್ಕೃತ, ಹಿಂದಿ, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಸ್ವತಃ ನಾನು ಅಂಧನಾಗಿದ್ದೇನೆ. ನನ್ನಂಥ ಅನೇಕ ಅಂಧರಿಗೆ ಪುಟ್ಟರಾಜರು ಜೀವನ ಕಟ್ಟಿಕೊಟ್ಟಿದ್ದಾರೆ ಎಂದರು.
ಡಾ. ಗಂಗೂಬಾಯಿ ಹಾನಗಲ್ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದ ವಿದ್ಯಾರ್ಥಿ ಸಿ. ದುರ್ಗೇಶ್, ನೂರು ರಾಗಗಳ ಒಡತಿಯಾದ ರಾಗದೇವತೆ ಗಂಗೂಬಾಯಿ ಅವರು ಗುರು ಸವಾಯಿ ಗಂಧರ್ವರಲ್ಲಿ ಸಂಗೀತ ದೀಕ್ಷೆ ಪಡೆದು, ಕಿರಾಣಾ ಘರಾಣೆಯಲ್ಲಿ ಪ್ರಭುತ್ವ ಸಾಧಿಸಿ, ತನ್ನ ಗಂಡು ಧ್ವನಿಯಲ್ಲಿ ಸಂಗೀತ ಹಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ನನ್ನಂಥ ಹಿಂದೂಸ್ತಾನಿ ಸಂಗೀತ ವಿದ್ಯಾರ್ಥಿಗಳಿಗೆ ಕಲಿಯಲು ಸ್ಫೂರ್ತಿ ಸೆಲೆಯಾಗಿದ್ದಾರೆ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ತಂಬೂರಿ ಮೀಟುವ ಮೂಲಕ ಸ್ವರಸಂಚಾರ ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ್ ಮಾತನಾಡಿ, ಕೀಳರಿಮೆ, ಹಿಂಜರಿಕೆ ಬಿಟ್ಟು ಪ್ರತಿಭೆಯನ್ನು ಹೊರಹಾಕಬೇಕು ಎಂದರು.ನಂತರ ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕ ಪಂ. ವಿರೂಪಾಕ್ಷಪ್ಪ ಇಟಗಿ ದುರ್ಗಾ ರಾಗದಲ್ಲಿ ಜೈಮಾತಾ ಭವಾನಿ ಮತ್ತು ಕಮಾಜ್ ರಾಗದಲ್ಲಿ ಒಂದು ಠುಮುರಿ ಗಾಯನ ಹಾಗೂ ಭೈರವಿ ರಾಗದಲ್ಲಿ ನೀ ಎನಗೆ ಗುರುವಾಗಬೇಕೆಂದು ಗಾಯನದ ಮೂಲಕ ಮನಸೆಳೆದರು.
ವಿದ್ಯಾರ್ಥಿಗಳಾದ ಚೌಡಿಬಾಯಿ, ಜ್ಯೋತಿ, ಹನುಮಂತ, ಲಾವಣ್ಯ ಕೊರ್ತಿ, ರವಿವರ್ಮ, ಕವನ, ಶರಣಮ್ಮ, ಮಧುಸೂದನ ಮೊದಲಾದವರು ಪುಟ್ಟರಾಜ ಗವಾಯಿಗಳಿಗೆ ಮತ್ತು ಗಂಗೂಬಾಯಿ ಹಾನಗಲ್ ಅವರಿಗೆ ಗಾಯನ ಸೇವೆ ಮಾಡಿದರು. ಉಪನ್ಯಾಸ ನೀಡಿದ ಪೂಜಾರಿ ದುರ್ಗೇಶ ಮತ್ತು ಸಿ. ದುರ್ಗೇಶ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಗುಂಡಿ ಭರತ್, ವಿದ್ಯಾರ್ಥಿ ವೇದಿಕೆಯ ಸಂಚಾಲಕ ರಾಜೇಶ್ ಹಳೆಮನೆ, ಲಕ್ಷ್ಮಿ ನಿರ್ವಹಿಸಿದರು.