ಸಾರಾಂಶ
ಯಾವುದೇ ದಾನಗಳಲ್ಲಿ ಸಿಗದ ತೃಪ್ತಿ ಅನ್ನದಾನದಿಂದ ಲಭಿಸುತ್ತದೆ. ಆದ್ದರಿಂದಲೇ ಉಡುಪಿ ಕೃಷ್ಣಮಠದಲ್ಲಿ ನಿತ್ಯ ಅನ್ನದಾನಕ್ಕೆ ಮಹತ್ವ ನೀಡಲಾಗುತ್ತದೆ ಎಂದು ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಯಾವುದೇ ದಾನಗಳಲ್ಲಿ ಸಿಗದ ತೃಪ್ತಿ ಅನ್ನದಾನದಿಂದ ಲಭಿಸುತ್ತದೆ. ಆದ್ದರಿಂದಲೇ ಉಡುಪಿ ಕೃಷ್ಣಮಠದಲ್ಲಿ ನಿತ್ಯ ಅನ್ನದಾನಕ್ಕೆ ಮಹತ್ವ ನೀಡಲಾಗುತ್ತದೆ ಎಂದು ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಪುತ್ತಿಗೆ ಮಠ ಪರ್ಯಾಯ ಮಹೋತ್ಸವ ಹಿನ್ನೆಲೆಯಲ್ಲಿ 6ನೇ ದಿನವಾದ ಭಾನುವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರಕುಮಾರ್ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ನೇತೃತ್ವದಲ್ಲಿ ಸಮರ್ಪಣೆಗೊಂಡ ಸಹಕಾರಿಗಳ ಹೊರೆಕಾಣಿಕೆ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತಮ್ಮ ಎರಡು ವರ್ಷದ ಪರ್ಯಾಯಾವಧಿಯಲ್ಲಿ ದೇಹಕ್ಕೆ ಸಾತ್ವಿಕ ಭೋಜನ ವಿತರಣೆ ಮತ್ತು ಬುದ್ಧಿಗೆ ಭಗವದ್ಗೀತೆ ಸಂದೇಶವನ್ನು ನೀಡುವ ಸಂಕಲ್ಪ ಮಾಡಿದ್ದೇವೆ ಎಂದರು.
ದಾನ ಮಾಡುವವರಿಗೆ ಕೈಯ್ಯಲಿ ಸಂಪತ್ತು ಇರಬೇಕು ಮತ್ತು ಮನಸ್ಸಿನಲ್ಲಿ ಕೊಡುವ ಭಾವನೆ ಮೂಡಬೇಕು. ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರಿಗೆ ಎರಡೂ ಇದೆ ಎಂದು ಬಣ್ಣಿಸಿದರು. ಶ್ರೀ ಕೃಷ್ಣನೇ ದೊಡ್ಡ ಬ್ಯಾಂಕ್. ಆತನಿಗೆ ಸಲ್ಲಿಕೆಯಾಗುವುದೆಲ್ಲವೂ ಎರಡರಷ್ಟು ಹಿಂದಕ್ಕೆ ನೀಡುತ್ತಾನೆ ಎಂದರು. ಈ ಸಂದರ್ಭ ಶ್ರೀಗಳು ರಾಜೇಂದ್ರಕುಮಾರ್ ಅವರನ್ನು ಗೌರವಿಸಿದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿದರು. ಪ್ರಸ್ತಾವನೆಗೈದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪುತ್ತಿಗೆ ಮಠಕ್ಕೂ ಸಹಕಾರಿ ಸಂಘಗಳಿಗೂ ಅವಿನಾಭಾವ ಸಂಬಂಧವಿದೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಪುತ್ತಿಗೆ ಶ್ರೀಗಳು ವಿದೇಶಗಳಲ್ಲೂ ಕೃಷ್ಣ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿದ ವಿಶ್ವಗುರು ಎಂದು ಬಣ್ಣಿಸಿದರು.
ಸಹಕಾರಿ ಧುರೀಣರಾದ ಡಾ.ದೇವಿಪ್ರಸಾದ ಶೆಟ್ಟಿ, ಶಿವಾಜಿ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಎನ್. ರಾಜು ಪೂಜಾರಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ರಘುಪತಿ ಭಟ್, ಕೋಶಾಧಿಕಾರಿ ರಂಜನ್ ಕಲ್ಕೂರ, ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು. ರಮೇಶ್ ಭಟ್ ನಿರೂಪಿಸಿದರು.104 ವಾಹನಗಳಲ್ಲಿ 40 ಲಕ್ಷ ರು.ಗಳ ಹೊರೆಕಾಣಿಕೆ
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಸ್ವಸಹಾಯ ಸಂಘಗಳು ಹಾಗೂ ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಸಂಘಗಳ ಮೂಲಕ ಸುಮಾರು 40 ಲಕ್ಷಕ್ಕೂ ಅಧಿಕ ಮೌಲ್ಯದ ಹಸಿರುವಾಣಿ 104 ವಾಹನಗಳಲ್ಲಿ ಸಲ್ಲಿಕೆಯಾಗುವ ಮೂಲಕ ಇದುವರೆಗೆ ಸಲ್ಲಿಕೆಯಾದ ಹೊರೆಕಾಣಿಕೆ ಸಲ್ಲಿಕೆಯಲ್ಲಿ ಬೃಹತ್ತಾಗಿ ಸಮರ್ಪಿಸಲಾಯಿತು.