ಪುತ್ತಿಗೆ ಪರ್ಯಾಯ: ಭಾರಿ ಹೊರೆಕಾಣಿಕೆ ಸಲ್ಲಿಕೆ

| Published : Jan 16 2024, 01:45 AM IST

ಪುತ್ತಿಗೆ ಪರ್ಯಾಯ: ಭಾರಿ ಹೊರೆಕಾಣಿಕೆ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತಿಗೆ ಪರ್ಯಾಯ ಮಹೋತ್ಸವ ಜ.18ರಂದು ನಡೆಯಲಿದ್ದು, ಮಲ್ಪೆ ಭಾಗದ ಮೊಗವೀರ ಸಮುದಾಯ, ಮಣಿಪಾಲ ಪರ್ಕಳ ಭಾಗದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯ ಮತ್ತು ಇತರ ಸಮುದಾಯದವರು ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ತೆಂಗಿನಕಾಯಿ, ಅಕ್ಕಿ, ಬಾಳೆಹಣ್ಣು ಇತ್ಯಾದಿ ತರಕಾರಿಗಳನ್ನು ತಂದೊಪ್ಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪುತ್ತಿಗೆ ಮಠದ ಪರ್ಯಾಯೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಮಂದಿಗೆ ಅನ್ನಸಂತರ್ಪಣೆಗೆ ಅನುಕೂಲವಾಗುವಂತೆ ಸೋಮವಾರ ಭಾರಿ ಪ್ರಮಾಣದಲ್ಲಿ ಹಸಿರು ಹೊರೆಕಾಣಿಕೆ ಸಲ್ಲಿಕೆಯಾಗಿದೆ. ಜೋಡುಕಟ್ಟೆಯಿಂದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಹೊರೆಕಾಣಿಕೆಯನ್ನು ತಂದು ಪುತ್ತಿಗೆ ಮಠಕ್ಕೆ ಸಲ್ಲಿಸಿದ್ದಾರೆ.

ಮಲ್ಪೆ ಭಾಗದ ಮೊಗವೀರ ಸಮುದಾಯ, ಮಣಿಪಾಲ ಪರ್ಕಳ ಭಾಗದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯ ಮತ್ತು ಇತರ ಸಮುದಾಯದವರು ಸಾವಿರಾರು ಸಂಖ್ಯೆಯಲ್ಲಿ ತೆಂಗಿನಕಾಯಿ, ಅಕ್ಕಿ, ಬಾಳೆಹಣ್ಣು ಇತ್ಯಾದಿ ತರಕಾರಿಗಳನ್ನು ತಂದೊಪ್ಪಿಸಿದರು.

ಸ್ವತಃ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು, ಜೋಡುಕಟ್ಟೆಯಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ, ಹೊರಕಾಣಿಕೆ ತಂದ ಭಕ್ತರನ್ನು ಅಭಿನಂದಿಸಿದರು.

ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಘುಪತಿ ಭಟ್, ಕೋಶಾಧಿಕಾರಿ ರಂಜನ್ ಕಲ್ಕೂರ, ಶ್ರೀಮಠದ ದಿವಾಣರಾದ ನಾಗರಾಜ ಆಚಾರ್ಯ ಮುಂತಾದವರು ಹೊರೆಕಾಣಿಕೆಯನ್ನು ಬರಮಾಡಿಕೊಂಡರು.

ರಥಬೀದಿ - ಕಿಕ್ಕಿರಿದ ಪ್ರೇಕ್ಷಕರು

ಸಂಜೆ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ರಾಜರಾಜೇಶ್ವರಿ ಭಜನಾ ಮಂಡಳಿ ಕುಂಜಿಬೆಟ್ಟು ಇವರಿಂದ ಭಜನೆ, ಕೃಷ್ಣರಾಜ ಭಟ್ ಕುತ್ಪಾಡಿ ಹಾಗೂ ವಿದುಷಿ ಅರುಂಧತಿ ವಶಿಷ್ಠ ಅವರಿಂದ ಹರಿಕಥಾಮೃತಮ್, ವಿದುಷಿ ಲಕ್ಷ್ಮೀ ಗುರುರಾಜ್ ಮತ್ತು ಬಳಗದವರಿಂದ ಭರತನಾಟ್ಯ ಪ್ರದರ್ಶನವನ್ನು ಕಿಕ್ಕಿರಿದ ಪ್ರೇಕ್ಷಕರು ಆನಂದಿಸಿದರು.

ಹೊರೆಕಾಣಿಕೆ ಸಂಗ್ರಹದ ಆವರಣದ ಕನಕದಾಸ ಮಂಟಪದಲ್ಲಿ ಜನಾರ್ದನ ಮತ್ತು ಬಳಗದವರಿಂಗ ಭಕ್ತಿ ರಸಮಂಜರಿ ಜನಮನ ರಂಜಿಸಿತು.

ಆರೆಸ್ಸೆಸ್ ಕಚೇರಿಗೆ ಶ್ರೀಗಳ ಭೇಟಿ

ಪುತ್ತಿಗೆ ಶ್ರೀಗಳು ಉಡುಪಿ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದರು. ಅವರನ್ನು ಸಂಘದ ಪ್ರಮುಖರಾದ ಶಂಭು ಶೆಟ್ಟಿ, ನಾರಾಯಣ ಶೆಣೈ, ಕೃಷ್ಣ ಶೆಟ್ಟಿ, ರಾಘವೇಂದ್ರ ಕಿಣಿ ಮತ್ತಿತರು ಗೌರವದಿಂದ ಸ್ವಾಗತಿಸಿದರು.

ಸಂಜೆ ಕಾರ್ಕಳದ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನ ಮತ್ತು ಅನಂತಪದ್ಮನಾಭ ದೇವಾಲಯಗಳಿಗೆ ಪುತ್ತಿಗೆ ಉಭಯ ಶ್ರೀಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.