ಸಾರಾಂಶ
ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಅರವಿಂದ್ ಲಿಂಬಾವಳಿ ಕೂಡ ಪುತ್ತಿಲ ಬಿಕ್ಕಟ್ಟು ಶಮನಕ್ಕೆ ಸೂಚನೆ ನೀಡಿದ್ದು, ಅದರಂತೆ ಶೀಘ್ರವೇ ಪುತ್ತಿಲರನ್ನು ಬೇಷರತ್ತಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಬಳಿಕ ಮತ್ತೆ ಪುತ್ತೂರಿನ ಹಿಂದು ಸಂಘಟಕ ಅರುಣ್ ಕುಮಾರ್ ಪುತ್ತಿಲ ಲೋಕಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ತಿಲ ಪರಿವಾರ ಘೋಷಣೆ ಮಾಡಿರುವ ಬೆನ್ನಿಗೇ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ. ಪುತ್ತೂರಿನಲ್ಲಿ ಶುಕ್ರವಾರ ಮಂಡಲ ಕೋರ್ ಕಮಿಟಿ ಸಭೆ ನಡೆದಿದ್ದು, ಅದರಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟನ್ನು ಅತ್ಯಂತ ತ್ವರಿತವಾಗಿ ಶಮನಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತಂತೆ ಶನಿವಾರ ಮಂಗಳೂರಿನಲ್ಲಿ ಬಿಜೆಪಿ ಮಹತ್ವದ ಸುದ್ದಿಗೋಷ್ಠಿ ಕೂಡ ನಡೆಸಲಿದೆ. ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಅಧ್ಯಕ್ಷ ಜಗನ್ನಿವಾಸ ರಾವ್ ಹಾಗೂ ಇಬ್ಬರು ಕಾರ್ಯದರ್ಶಿಗಳು, ಪುತ್ತೂರು ಉಸ್ತುವಾರಿ ಪ್ರೇಮಾನಂದ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಬಿಜೆಪಿ ಟಿಕೆಟ್‌ಗೆ ಪಟ್ಟುಹಿಡಿದಿರುವ ಸತ್ಯಜಿತ್ ಸುರತ್ಕಲ್ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ, ಅಲ್ಲದೆ ಅಭಿಮಾನಿಗಳ ಸಮಾವೇಶ ಕೂಡ ನಡೆಸಿದ್ದಾರೆ. ಇದೇ ವೇಳೆ ಪುತ್ತೂರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯನ್ನು ತೃತೀಯ ಸ್ಥಾನಕ್ಕೆ ತಳ್ಳಿದ ಅರುಣ್ ಕುಮಾರ್ ಪುತ್ತಿಲ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಹೊರಬಿದ್ದಿರುವ ಬೆನ್ನಿಗೇ ಬಿಜೆಪಿ ಕೂಡ ಮೃದು ಧೋರಣೆಗೆ ಹೊರಟಿದೆ. ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಅರವಿಂದ್ ಲಿಂಬಾವಳಿ ಕೂಡ ಪುತ್ತಿಲ ಬಿಕ್ಕಟ್ಟು ಶಮನಕ್ಕೆ ಸೂಚನೆ ನೀಡಿದ್ದು, ಅದರಂತೆ ಶೀಘ್ರವೇ ಪುತ್ತಿಲರನ್ನು ಬೇಷರತ್ತಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಪುತ್ತಿಲಗೆ ಮಂಡಲ ಸ್ಥಾನ?: ಸಭೆಯಲ್ಲಿ ಸಾಜ ರಾಧಾಕೃಷ್ಣ ಆಳ್ವ ಅವರಿಗೆ ಲೋಕಸಭಾ ಚುನಾವಣೆಯ ಪುತ್ತೂರು ಮಂಡಲ ಉಸ್ತುವಾರಿ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಹೀಗಾದರೆ ಅರುಣ್ ಕುಮಾರ್ ಪುತ್ತಿಲಗೆ ಮಂಡಲ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಪಕ್ಷ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.