ಪುತ್ತೂರು : ಸಾವಿರಾರು ಜನರನ್ನು ದುಶ್ಚಟ ಮುಕ್ತರನ್ನಾಗಿ ಹೊಸ ಬದುಕು ನೀಡಿದ ಕೀರ್ತಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆಗೆ ಸಲ್ಲುತ್ತದೆ. ಸಂಘಟನೆಯ ಮೂಲಕ ಸ್ವಾವಲಂಬಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಕಾರ್ಯವು ನಡೆಯುತ್ತಿರುವುದು ಶ್ಲಾಘನೀಯವಾದದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪುತ್ತೂರು ವಲಯ, ಪ್ರಗತಿಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಕಸಬಾ, ಬಪ್ಪಳಿಗೆ, ಪರ್ಲಡ್ಕ, ಪಡೀಲು, ಸಾಲ್ಮರ, ಬೊಳ್ವಾರು, ಜಿಡೆಕಲ್ಲು, ಸಾಮೆತ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರುಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಭಾನುವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ವಾರ್ಷಿಕೋತ್ಸವ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್-2 ದ.ಕ ಜಿಲ್ಲೆ ಇದರ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, 44 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಸ್ತುತ ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ವಿಸ್ತರಣೆಗೊಂಡಿದೆ. 22 ಸಾವಿರ ಹಳ್ಳಿಗಳಲ್ಲಿ ಇದೆ. ಸಂಘಟಿತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದೆ. ವ್ಯಕ್ತಿ ಶಕ್ತಿಯಾಗಬೇಕು, ಆತ ಸಮಾಜದ ಮುಖ್ಯವಾಹಿನಿಗೆ ಬರಬೇಕು ಅನ್ನುವುದೇ ಯೋಜನೆಯ ಮುಖ್ಯ ಉದ್ದೇಶ ಎಂದರು.

ದ.ಕ.ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿ ಕಲ್ಪನೆ ಒಂದು ದೂರದೃಷ್ಟಿತ್ವದ ಯೋಜನೆ. ಸರ್ಕಾರ ಮಾಡದ ಯೋಚನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು 40 ವರ್ಷದ ಹಿಂದೆಯೇ ಮಾಡಿದ್ದರು. ಸುಂದರ ಸಮಾಜ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಯಾವ ರೀತಿ ಕಾರ್ಯಗಳು ಬೇಕು ಅನ್ನುವುದನ್ನು ಯೋಜನೆಯ ಮೂಲಕ ಅನುಷ್ಠಾನಿಸಲಾಗಿದೆ. ಜನಜಾಗೃತಿಯ ಮೂಲಕ ದುಶ್ಚಟಮುಕ್ತ ಸಮಾಜದ ನಿರ್ಮಾಣದ ಕಾರ್ಯವೂ ನಡೆಯುತ್ತಿದೆ ಎಂದರು.ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಸುಭಾಷ್ ರೈ, ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ, ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಸತೀಶ್ ನೈಕ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಯೋಜನಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.ಒಕ್ಕೂಟದ ಸದಸ್ಯರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಪ್ಪಳಿಗೆ ಒಕ್ಕೂಟದ ಸದಸ್ಯ ಗಿರೀಶ್ ಸ್ವಾಗತಿಸಿದರು. ಪರ್ಲಡ್ಕ ಒಕ್ಕೂಟದ ಪದಾಧಿಕಾರಿ ರಾಜೇಶ್ ವರದಿ ಮಂಡಿಸಿದರು. ದಾಖಲಾತಿ ಸಮಿತಿಯ ಚೇತನಾ ವಂದಿಸಿದರು. ಸೇವಾಪ್ರತಿನಿಧಿ ನಳಿನಾಕ್ಷಿ ನಿರೂಪಿಸಿದರು.