ಬೈಕ್ ಅಪಘಾತ: ಗಾಯಾಳು ಯುವಕ ಸಾವು

| Published : Mar 07 2024, 01:49 AM IST

ಸಾರಾಂಶ

ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿರುವ ಪ್ರಸಾದ್ ಫೆ.೨೯ರಂದು ತನ್ನ ಬೈಕ್‌ನಲ್ಲಿ ಬರುತ್ತಿದ್ದ ವೇಳೆಯಲ್ಲಿ ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದಿತ್ತು. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪುತ್ತೂರು: ವಾರದ ಹಿಂದೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ನಗರದ ಬೈಪಾಸ್‌ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಬೀರ್ಮಕಜೆ ಎಂಬಲ್ಲಿನ ನಿವಾಸಿ ಪ್ರಸಾದ್ (೨೭) ಮೃತ ಯುವಕ. ನಗರದ ಬೈಪಾಸ್‌ನಲ್ಲಿರುವ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿರುವ ಪ್ರಸಾದ್ ಫೆ.೨೯ರಂದು ತನ್ನ ಬೈಕ್‌ನಲ್ಲಿ ಬರುತ್ತಿದ್ದ ವೇಳೆಯಲ್ಲಿ ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದಿತ್ತು. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧ ವ್ಯಾಪಾರಿಯಿಂದ ಮೊಬೈಲ್‌, ನಗದು ಲೂಟಿ

ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಬಂದು ೮ ಕೆ.ಜಿ. ರಸಬಾಳೆಹಣ್ಣು, ೪ ಕೆ.ಜಿ. ಟೊಮೆಟೋ ಕಟ್ಟಿ ಹಿಡಿ ಎಂದು ತಿಳಿಸಿ ವಯೋವೃದ್ದ ವ್ಯಾಪಾರಿಯಿಂದ ಮೊಬೈಲ್ ಮತ್ತು ನಗದು ಹಣವನ್ನು ಪಡೆದು ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿನ ಹಣ್ಣು ಮತ್ತು ತರಕಾರಿ ವ್ಯಾಪಾರಿ ಫಕ್ರುದ್ದೀನ್ (೭೫) ಅಂಗಡಿಗೆ ಬಂದ ೪೦ರ ಹರೆಯದ ವ್ಯಕ್ತಿ ೮ ಕೆ ಜಿ ಮಾಗಿದ ರಸಬಾಳೆ ಹಣ್ಣು ಹಾಗೂ ೪ ಕೆ ಟೋಮೇಟೋ ಬೇಕೆಂದು ತಿಳಿಸಿದ್ದಾನೆ. ಮೊಬೈಲ್ ಬಿಟ್ಟು ಬಂದಿದ್ದೇನೆ. ಇನ್ನಷ್ಟು ತರಕಾರಿ ಬೇಕೆಂದು ಮನೆಯಲ್ಲಿ ತಿಳಿಸಿದ್ದಾರೆ. ಪೋನಾಯಿಸಿ ವಿಚಾರಿಸುವುದಕ್ಕಾಗಿ ಒಮ್ಮೆ ಪೋನ್ ಕೊಡಿ ಎಂದು ವ್ಯಾಪಾರಿಯ ಮೊಬೈಲ್ ಪೋನ್ ಪಡೆದುಕೊಂಡಿದ್ದಾನೆ. ಕರೆ ಮಾಡುವ ನಟನೆ ಮಾಡಿ ೧೦೦೦ ರುಪಾಯಿ ಕೊಡುವಂತೆ ಕೇಳಿದ್ದು, ಅಷ್ಟು ಹಣ ನನ್ನಲ್ಲಿ ಇಲ್ಲ ಎಂದಾಗ ವ್ಯಾಪಾರಿಯ ಬಳಿ ಇದ್ದ ೫೦೦ ರುಪಾಯಿ ಪಡೆದು ಮೊಬೈಲ್ ಫೋನ್‌ನೊಂದಿಗೆ ಈಗ ಬರುತ್ತೇನೆಂದು ಹೇಳಿ ಹೋದಾತ ವಾಪಸ್‌ ಬರದೆ ವಂಚಿಸಿದ್ದಾನೆ.

ಬಾಳೆಹಣ್ಣು ಮತ್ತು ಟೋಮೆಟೋವನ್ನು ಕಟ್ಟಿ ಗ್ರಾಹಕನನ್ನು ಕಾಯುತ್ತಿದ್ದ ಫಕ್ರುದ್ಧೀನ್‌ ಅವರಿಗೆ ಎಷ್ಟು ಹೊತ್ತಾದರೂ ಆತ ಬಾರದೇ ಇದ್ದಾಗ ತಾನು ಮೋಸ ಹೋಗಿರುವ ವಿಚಾರ ತಿಳಿದು ಕಂಗಾಲಾಗಿದ್ದಾರೆ. ತನ್ನ ಹಣ ಮತ್ತು ಮೊಬೈಲ್ ಹಿಂತಿರುಗಿಸಿ ಕೊಡಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ. ತಂಡದಿಂದ ಹಲ್ಲೆ, ಜೀವಬೆದರಿಕೆ; ದೂರು ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಮಸೀದಿ ಬಳಿ ತಂಡವೊಂದು ತನ್ನ ಮೇಲೆ ಹಲ್ಲೆ‌ ನಡೆಸಿರುವುದಾಗಿ ಸ್ಥಳೀಯ ನಿವಾಸಿ ಅಶ್ರಫ್ ಪಿ. ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಲೈಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು ಕಿಟ್ ಹಂಚುವ ವಿಚಾರವಾಗಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೆ ಮತ್ತಿಬ್ಬರು ಆರೋಪಿಗಳು ಹಲ್ಲೆ ನಡೆಸಿ ಗಾಯ ಮಾಡಿರುತ್ತಾರೆ‌ ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ‌ ಅಶ್ರಫ್ ಆರೋಪಿಸಿದ್ದಾರೆ.

ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಘಟನೆಯ ಮುಂದುವರಿದ ಭಾಗವಾಗಿ ಸ್ಥಳೀಯ ನಿವಾಸಿ ಜೈನಾಬ್ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಕೆಲವು ಆರೋಪಿಗಳು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಜೈನಾಬ್ ಅವರಿಗೆ ಹಾಗೂ ಅವರ ಅಣ್ಣ ಅಬ್ದುಲ್ ರಹಿಮಾನ್ ಎಂಬವರ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಗೆ ಒಳಗಾದ ಮಹಿಳೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಯ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.