ಸಾರಾಂಶ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಪುತ್ತೂರು ವತಿಯಿಂದ ದರ್ಬೆ ವೃತ್ತದ ಬಳಿ ಮಂಗಳವಾರ ಪ್ರತಿಭಟನೆ, ಪ್ರತಿಕೃತಿ ದಹನ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಸಾಮಾಜಿಕ ನ್ಯಾಯಕ್ಕಾಗಿ, ಕಟ್ಟ ಕಡೆಯ ವ್ಯಕ್ತಿಯ ಪ್ರಗತಿಗಾಗಿ ಸಂವಿಧಾನ ರೂಪುಗೊಂಡಿದೆ. ಆದರೆ ಕಾಂಗ್ರೆಸ್ ಅದನ್ನು ಓಟ್ ಬ್ಯಾಂಕ್ ಕೆಲಸಕ್ಕೆ ಬಳಸಲು ಮುಂದಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಆರೋಪಿಸಿದರು.ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಪುತ್ತೂರು ವತಿಯಿಂದ ದರ್ಬೆ ವೃತ್ತದ ಬಳಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ ಇವರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರ್ಕಾರಿ ಗುತ್ತಿಗೆಯಲ್ಲಿ೪ ಶೇ. ಮೀಸಲಾತಿಗೆ ಕಾಂಗ್ರೆಸ್ ಮುಂದಾಗಿರುವುದು ಕಾಂಗ್ರೆಸ್‌ನ ಡಿ.ಎನ್.ಎ. ಏನು ಎಂದುದನ್ನು ಮತ್ತೆ ಸಾಬೀತುಪಡಿಸಿದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಪುತ್ತೂರು ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ಪ್ರಮುಖರಾದ ಬೂಡಿಯಾರು ರಾಧಾಕೃಷ್ಣ ರೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ಶಶಿಕುಮಾರ್ ಬಾಲ್ಯೊಟ್ಟು ಮತ್ತಿತರರು ಭಾಗವಹಿಸಿದ್ದರು.ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿದರು. ನಾಗೇಶ್ ಕೆಮ್ಮಾಯಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಕೃತಿ ದಹನಕ್ಕೆ ತಡೆ:ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹನಕ್ಕೆ ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಅದನ್ನು ತಡೆಯಲು ಮುಂದಾದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಕಾರ್ಯಕರ್ತರು ಪೊಲೀಸರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮಧ್ಯಕ್ಕೆ ತಂದು ಪ್ರತಿಕೃತಿಗೆ ಬೆಂಕಿ ಹಚ್ಚಲಾಯಿತು.