ಸಾರಾಂಶ
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಮಂಗಳೂರು ನವಕರ್ನಾಟಕ ಪ್ರಕಾಶನದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-೨೦೨೫ರ ಅಂಗವಾಗಿ ನ.೪ರಿಂದ ೭ರ ತನಕ ನಡೆಯಲಿರುವ ಐದು ದಿನಗಳ ಪುಸ್ತಕ ಪ್ರದರ್ಶನ- ಮಾರಾಟ ಮೇಳವನ್ನು ಮಂಗಳವಾರ ಕಾಲೇಜಿನ ಸಿಲ್ವರ್ ಜುಬಿಲಿ ಸ್ಮಾರಕ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.
ಕಾಲೇಜು ಪ್ರಾಚಾರ್ಯ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಸಪ್ತಾಹ ಉದ್ಘಾಟಿಸಿ, ಪುಸ್ತಕಗಳು ನಮ್ಮ ಜೀವನದ ಶಾಶ್ವತ ಸಂಗಾತಿಗಳು. ಅವು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಸೃಜನಾತ್ಮಕತೆಯನ್ನು ಬೆಳೆಯಿಸುತ್ತವೆ. ತ್ವರಿತ ಮಾಹಿತಿ ಯುಗದಲ್ಲಿ ಪುಸ್ತಕ ಪ್ರದರ್ಶನಗಳು ಮುದ್ರಿತ ಜ್ಞಾನದ ಅವಶ್ಯಕತೆಯನ್ನು ನಮಗೆ ನೆನಪಿಸುತ್ತವೆ. ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮತ್ತು ಬರೆಯುವ ಕ್ರಿಯಾಶೀಲತೆಯನ್ನು ಬೆಳೆಸುವ ಸದುದ್ದೇಶದಿಂದ ಸಂತ ಫಿಲೋಮಿನಾ ಕಾಲೇಜಿನಲ್ಲಿ ನವೆಂಬರನ್ನು ಗ್ರಂಥಾಲಯ ತಿಂಗಳಾಗಿ ಘೋಷಿಸಲಾಗಿದೆ ಎಂದರು.ಅತಿಥಿ, ನವಕರ್ನಾಟಕ ಪ್ರಕಾಶನ ಮಂಗಳೂರು ಶಾಖೆಯ ವ್ಯವಸ್ಥಾಪಕ ಹರೀಶ್ ಕುಮಾರ್ ಮಾತನಾಡಿ, ಪುಸ್ತಕದ ಮೂಲಕ ಮಾನವ ಕುಲದ ಸೇವೆ ಸಾಧ್ಯ. ವೈಚಾರಿಕ ಪುಸ್ತಕಗಳ ಪ್ರಕಟಣೆಯೇ ನಮ್ಮ ಪ್ರಕಾಶನದ ಧ್ಯೇಯ. ಗುಣಮಟ್ಟದ ಪುಸ್ತಕಗಳನ್ನು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ. ಇಂತಹ ಪ್ರದರ್ಶನಗಳು ಓದುಗರ ಮತ್ತು ಲೇಖಕರ ನಡುವಿನ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಹರಿನಾರಾಯಣ ಮಾಡಾವು, ನಿವೃತ್ತ ಹಿಂದಿ ಉಪನ್ಯಾಸಕ ಪ್ರೊ. ವಿಷ್ಣು ಭಟ್ ಉಪಸ್ಥಿತರಿದ್ದರು.ಕಾಲೇಜಿನ ಮುಖ್ಯ ಗ್ರಂಥಪಾಲಕ ಅಬ್ದುಲ್ ರಹ್ಮಾನ್ ಜಿ. ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕ ಮನೋಹರ್ ವಂದಿಸಿದರು. ಉಪನ್ಯಾಸಕ ಪ್ರಶಾಂತ್ ರೈ ನಿರೂಪಿಸಿದರು.
ಪ್ರದರ್ಶನದಲ್ಲಿ ಸಾಹಿತ್ಯ, ವಿಜ್ಞಾನ, ವಾಣಿಜ್ಯ ನಿರ್ವಹಣೆ, ತಂತ್ರಜ್ಞಾನ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇರಿಸಲಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))