ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ನಾಡು ಕಟ್ಟುವ ತುಡಿತ ಹೊಂದಿ ೪೦೦ ವರ್ಷಗಳ ಹಿಂದೆಯೇ ದೂರದೃಷ್ಟಿಯ ಬೆಂಗಳೂರು ಕಟ್ಟಿದ ದಾರ್ಶನಿಕ ನಾಡಪ್ರಭು ಕೆಂಪೇಗೌಡ ಅವರ ಕುರಿತು ಯುವ ಸಮುದಾಯ ತಿಳಿದುಕೊಳ್ಳಬೇಕು. ಆದರೆ ಕೆಂಪೇಗೌಡರ ಸಾಧನೆಗಳು ಮರೆಯಾಗುತ್ತಿರುವುದು ಇಂದಿನ ದುರಂತ ಎಂದು ವಿವೇಕಾನಂದ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ ನಿಡ್ಪಳ್ಳಿ ಹೇಳಿದ್ದಾರೆ.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪುತ್ತೂರು ಹಾಗೂ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಉಪನ್ಯಾಸ ನೀಡಿದರು.ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ನಾಡಪ್ರಭು ಕೆಂಪೇ ಗೌಡ ನೀಡಿದ ಕೊಡುಗೆ, ಅವರು ಮಾಡಿದ ಸಾಧನೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಅವರ ಜನ್ಮದಿನಾಚರಣೆಯೂ ಒಂದು ಸಮಾಜಕ್ಕೆ ಸೀಮಿತವಲ್ಲ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಈಗಿರುವ ಬೆಂಗಳೂರಿನ ಕನಸನ್ನು ನೂರಾರು ವರ್ಷಗಳ ಹಿಂದೆಯೇ ಯೋಚನೆ ಮಾಡಿದ್ದ ಕೆಂಪೇ ಗೌಡರವರು ಮಾಡಿದ ಸಾಧನೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಇದ್ದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಅತಿಥಿಗಳನ್ನು ಗೌರವಿಸಿದರು. ಉಪ ತಹಸೀಲ್ದಾರ್ ಸುಲೋಚನಾ ಪಿ.ಕೆ. ಸ್ವಾಗತಿಸಿದರು. ತಾಲೂಕು ಕಚೇರಿಯ ವಿಷಯ ನಿರ್ವಾಹಕ ದಯಾನಂದ ಡಿ.ಟಿ. ವಂದಿಸಿದರು. ಶಿಕ್ಷಕರಾದ ಆಶಾ ಹಾಗೂ ಲತಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.