ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಮಳೆಗಾಲದ ಪೂರ್ವಭಾವಿಯಾಗಿ ನಗರಸಭಾ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಸ್ವಚ್ಛಗೊಳಿಸುವ ಕಾಮಗಾರಿಯು ಪ್ರಾರಂಭಗೊಂಡಿದ್ದು ಬುಧವಾರ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಪ್ರಾರಂಭದಲ್ಲಿ ನೆಲ್ಲಿಕಟ್ಟೆ ಹಿಂದು ರುದ್ರಭೂಮಿ ಸಮಿಪದಲ್ಲಿ ಹಾದುಹೋಗುವ ರಾಜಕಾಲುವೆಯನ್ನು ವೀಕ್ಷಿಸಿದರು. ಬಳಿಕ ಮುಖ್ಯರಸ್ತೆಯ ಗಣೇಶ್ ಪ್ರಸಾದ್ ಹೊಟೇಲ್ ಬಳಿ, ಎಪಿಎಂಸಿ ರಸ್ತೆಯಲ್ಲಿರುವ ರಾಜಕಾಲುವಗಳ ಬಳಿಗೆ ತೆರಳಿ ಕಾಮಗಾರಿಯ ಪರಿಶೀಲನೆ ನಡೆಸಿದರು.
ರಾಜಕಾಲುವೆ ಸ್ವಚ್ಚಗೊಳಿಸುವ ಕಾಮಗಾರಿಯ ಬಗ್ಗೆ ನಗರಸಭಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಹಾಯಕ ಆಯುಕ್ತರು ಸ್ವಚ್ಚತಾ ಕಾಮಗಾರಿ ಶೀಘ್ರವಾಗಿ ಹಾಗೂ ಸಮಪರ್ಕವಾಗಿ ನಡೆಸುವಂತೆ ಸೂಚನೆ ನೀಡಿದರು. ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಮಳೆಗಾಲದ ಪೂರ್ವಭಾವಿಯಾಗಿ ರಾಜಕಾಲುವೆಗಳನ್ನು ಶುಚಿಗೊಳಿಸಲಾಗುತ್ತಿದೆ. ರಾಜಕಾಲುವೆಗಳಲ್ಲಿ ತ್ಯಾಜ್ಯ ತುಂಬಿರುವ ದೂರುಗಳೂ ಬಂದಿತ್ತು. ಕಳೆದ ವರ್ಷವೂ ನಗರ ಸಭೆಯಿಂದ ೧೦ ಲಕ್ಷ ರು. ವೆಚ್ಚದಲ್ಲಿ ರಾಜಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ.
ಈ ವರ್ಷ ಪುತ್ತೂರು ಜಾತ್ರೆಯ ಸಮಯದಲ್ಲಿ ದೇವಸ್ಥಾನದ ಸುತ್ತಲಿನಲ್ಲಿ ರಾಜಕಾಲುವೆಗಳನ್ನು ಸ್ವಚ್ಚಗೊಳಿಸಲಾಗಿತ್ತು. ಪ್ರಥಮ ಮಳೆಗೆ ತ್ಯಾಜ್ಯಗಳು ಬರುವುದು ಸಾಮಾನ್ಯ. ಆದರೂ ಕಾಳಜಿ ವಹಿಸಿ ಕ್ರಮ ವಹಿಸಲಾಗಿದೆ. ಈ ಹಿಂದೆ ನಡೆದ ನೆರೆ ಬರುವಂತಹ ಪ್ರದೇಶಗಳನ್ನು ಪಟ್ಟಿ ಮಾಡಿಕೊಂಡು ಅಲ್ಲಿ ಪ್ರಥಮವಾಗಿ ಜೆಸಿಬಿ ಮೂಲಕ ಸ್ವಚ್ಚಗೊಳಿಸುವ ಕಾರ್ಯವನ್ನು ನಗರಸಭೆಯಿಂದ ಪ್ರಾರಂಭಿಸಲಾಗಿದೆ. ೨- ೩ ವಾರದಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಜೊತೆಗೆ ಮುಂಗಾರು ಮಳೆಗೆ ಪೂರ್ವಭಾವಿಯಾಗಿ ರಾಜಕಾಲುವೆಗಳನ್ನು ಸ್ವಚ್ಚಗೊಳಿಸುವ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪುತ್ತೂರು ತಹಸೀಲ್ದಾರ್ ಕುಂಞ ಅಹಮ್ಮದ್, ನಗರಸಭಾ ಪೌರಾಯುಕ್ತ ಬದ್ರುದ್ದೀನ್ ಸೌದಾಗರ, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದುರ್ಗಾಪ್ರಸಾದ್, ಶಬರಿನಾಥ್ ರೈ, ಸಹಾಯಕ ಅಭಿಯಂತರ ಕೃಷ್ಣ ಮೂರ್ತಿ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಕೆ., ಶ್ವೇತಾಕಿರಣ್, ನಗರಸಭೆ ನೀರು ಸರಬರಾಜು ವಿಭಾಗ ಜಲಸಿರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾದೇಶ್, ಎಂಜಿನಿಯರ್ ಗೌತಮ್ , ಸಹಾಯಕ ಎಂಜಿನಿಯರ್ ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.