ಪುತ್ತೂರು: ಹಿಂಜಾವೇ ಮುಖಂಡರ ಗಡಿಪಾರು ನೋಟಿಸ್‌ಗೆ ನ್ಯಾಯಾಲಯ ತಡೆಯಾಜ್ಞೆ

| Published : Feb 11 2024, 01:46 AM IST

ಪುತ್ತೂರು: ಹಿಂಜಾವೇ ಮುಖಂಡರ ಗಡಿಪಾರು ನೋಟಿಸ್‌ಗೆ ನ್ಯಾಯಾಲಯ ತಡೆಯಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾದಿತರಾದ ದಿನೇಶ್ ಪಂಜಿಗ ಮತ್ತು ಯಶೋಧರ ಅವರು ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಗಡಿಪಾರು ನೋಟಿಸ್‌ಗೆ ತಡೆಯಾಜ್ಞೆ ನೀಡಿದೆ ಹಾಗೂ ಆರೋಪಿಗಳ ವಿರುದ್ಧ ದಾಖಲಿಸಿದ ಎಲ್ಲ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿದೆ.

ಪುತ್ತೂರು: ಹಿಂದೂ ಜಾಗರಣಾ ವೇದಿಕೆಯ ಮುಖಂಡರಾಗಿರುವ ದಿನೇಶ್ ಪಂಜಿಗ ಹಾಗೂ ಯಶೋಧರ ಅವರಿಗೆ ಗಡಿಪಾರಿಗೆ ಸಂಬಂಧಿಸಿದಂತೆ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿಗಳು ಕೆಲ ದಿನಗಳ ಹಿಂದೆ ನೀಡಿದ್ದ ನೋಟಿಸ್‌ಗೆ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಪುತ್ತೂರು ತಾಲೂಕಿನ ಶಾಂತಿಗೋಡು ನಿವಾಸಿ ದಿನೇಶ್ ಪಂಜಿಗ ಹಾಗೂ ಬೆಳ್ತಂಗಡಿಯ ಯಶೋಧರ ಅವರನ್ನು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ ೫೫ರಂತೆ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಉಪ ವಿಭಾಗೀಯ ದಂಡಾಧಿಕಾರಿಗಳು ಅವರಿಗೆ ನೊಟೀಸ್ ಜಾರಿಗೊಳಿಸಿದ್ದರು. ಈ ಬಗ್ಗೆ ಸ್ವತಃ ನ್ಯಾಯವಾದಿಗಳ ಮೂಲಕ ಉಪ ವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ವಾದಿಸಲು ಸೂಚಿಸಲಾಗಿತ್ತು. ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ಆಸಕ್ತಿ ಇಲ್ಲವೆಂದು ಲಭ್ಯವಿರುವ ಮಾಹಿತಿಯಂತೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಆಪಾದಿತರಾದ ದಿನೇಶ್ ಪಂಜಿಗ ಮತ್ತು ಯಶೋಧರ ಅವರು ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಗಡಿಪಾರು ನೋಟಿಸ್‌ಗೆ ತಡೆಯಾಜ್ಞೆ ನೀಡಿದೆ ಹಾಗೂ ಆರೋಪಿಗಳ ವಿರುದ್ಧ ದಾಖಲಿಸಿದ ಎಲ್ಲ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿದೆ.

ಅರ್ಜಿದಾರರ ಪರವಾಗಿ ಪುತ್ತೂರಿನ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.