ಪುತ್ತೂರು: ಕನ್ನಡ ರಾಜ್ಯೋತ್ಸವ, ಕನ್ನಡ ಭುವನೇಶ್ವರಿ ವೈಭವದ ಮೆರವಣಿಗೆ

| Published : Nov 02 2024, 01:19 AM IST

ಪುತ್ತೂರು: ಕನ್ನಡ ರಾಜ್ಯೋತ್ಸವ, ಕನ್ನಡ ಭುವನೇಶ್ವರಿ ವೈಭವದ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ದರ್ಬೆ ವೃತ್ತದ ಬಳಿಯಿಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಯು ನಡೆಯಿತು. ಮೆರವಣಿಗೆಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ನೀಡಿದರು. ಮೆರವಣಿಗೆಯು ಮುಖ್ಯ ರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನ ಬಳಿಯ ಮಂಗಲ್ ಪಾಂಡೆ ಚೌಕದ ಬಳಿ ಮುಕ್ತಾಯಗೊಂಡಿತು.

ಕನ್ನಡಪ್ರಭವಾರ್ತೆ ಪುತ್ತೂರು

ಮಕ್ಕಳು ರಾಜಕೀಯಕ್ಕೆ ಹೊಗದಂತೆ ಪೋಷಕರು ತಡೆಯಬಾರದು. ಮಕ್ಕಳಿಗೆ ರಾಜ್ಯಶಾಸ್ತ್ರವನ್ನು ಓದಿಸಬೇಕು. ರಾಜಕೀಯವೆಂದರೆ ಕಾಳೆಲೆಯುವ ಕೆಲಸವಲ್ಲ ಬದಲಿಗೆ ಇದು ದೇಶವನ್ನು ಆಳುವ ಕೆಲಸ. ಇದೊಂದು ದೇಶಕ್ಕೆ ಮತ್ತು ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸವಾಗಿದೆ. ರಾಜಕೀಯದಲ್ಲೂ ೬೫ ವರ್ಷಕ್ಕೆ ನಿವೃತ್ತಿಯಿರಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ, ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪುರಸ್ಕಾರ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಹಿನ್ನಲೆಯಲ್ಲಿ, ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಬಾಗದಲ್ಲಿನ ಕಿಲ್ಲೆ ಮೈದಾನದ ಬಳಿಯಿರುವ ಮಂಗಲ್ ಪಾಂಡೆ ಚೌಕದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಸಂದೇಶ ನೀಡಿದರು. ಪ್ರಪಂಚದ ಆರ್ಥಿಕ ಸ್ಥಿತಿಯಲ್ಲಿ ಭಾರತ ೫ನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ರಾಜ್ಯ ೩ನೇ ಸ್ಥಾನದಲ್ಲಿದೆ. ದೇಶದ ಆರ್ಥಿಕತೆಯಲ್ಲಿ ಸುಮಾರು ಶೇ.೧೦ರಷ್ಟು ಕೊಡುಗೆ ಕರ್ನಾಟಕದದ್ದಾಗಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ ೧೦ ವರ್ಷದಲ್ಲಿ ಬೆಂಗಳೂರು ಕ್ಯಾಲಿಪೋರ್ನಿಯಾ ಆಫ್ ಇಂಡಿಯಾವಾಗಲಿದೆ. ಕರ್ನಾಟಕದಿಂದ ದೇಶಕ್ಕೆ ಕೇವಲ ಆರ್ಥಿಕ ಕೊಡುಗೆ ಮಾತ್ರವಲ್ಲ. ಶ್ರೀಮಂತ ಸಂಪ್ರದಾಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೇ ಪ್ರಥಮವಾಗಿದೆ ಎಂದರು.

ವೈಭವದ ಕನ್ನಡ ಭುವನೇಶ್ವರಿ ಮೆರವಣಿಗೆ: ಬೆಳಗ್ಗೆ ನಗರದ ದರ್ಬೆ ವೃತ್ತದ ಬಳಿಯಿಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಯು ನಡೆಯಿತು. ಮೆರವಣಿಗೆಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ನೀಡಿದರು. ಮೆರವಣಿಗೆಯು ಮುಖ್ಯ ರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನ ಬಳಿಯ ಮಂಗಲ್ ಪಾಂಡೆ ಚೌಕದ ಬಳಿ ಮುಕ್ತಾಯಗೊಂಡಿತು. ಬಳಿಕ ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕದಳ, ಅಗ್ನಿಶಾಮಕ ದಳ, ಕೊಂಬೆಟ್ಟು ಪ್ರೌಢಶಾಲೆಯ ಎನ್‌ಸಿಸಿ ಮತ್ತು ಎಸ್‌ಪಿಸಿ, ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್‌ಸಿಸಿ ಮತ್ತು ರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಗೌರವರಕ್ಷೆ ನೆರವೇರಿತು. ಬಳಿಕ ಪುರಭವನದ ಮುಂಭಾಗದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ತಾಲೂಕು ಕನ್ನಡ ರಾಜ್ಯೋತ್ಸವ ಪುರಸ್ಕಾರ: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ರಾಧಾಕೃಷ್ಣ ರೈ (ಜಾನಪದ), ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ (ಕ್ರೀಡೆ), ಅಬ್ದುಲ್ ರಝಾಕ್ ಬಪ್ಪಳಿಗೆ (ಸಮಾಜಸೇವೆ), ತಿಮ್ಮಪ್ಪ ಪೂಜಾರಿ (ರಂಗಭೂಮಿ), ಡಾ. ಸತೀಶ್ ಶೆಣೈ (ವೈದ್ಯಕೀಯ), ಡಾ. ರಾಜಾರಾಮ್ ಕೆ.ಬಿ. (ವೈದ್ಯಕೀಯ), ಜಯಗುರು ಆಚಾರ್ ಹಿಂದಾರು (ಕೃಷಿ), ಪಾಕತಜ್ಞ ಹರೀಶ್ ರಾವ್ (ಸಮಾಜಸೇವೆ), ಡಾ. ಸುಕುಮಾರ ಗೌಡ (ಶಿಕ್ಷಣ) ಮತ್ತು ಸಂಘ ಸಂಸ್ಥೆ ವಿಭಾಗದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರಿಗೆ ಕನ್ನಡ ರಾಜ್ಯೋತ್ಸವ ತಾಲೂಕು ಪುರಸ್ಕಾರ ನೀಡಿ ಗೌರವಿಸಲಾಯಿತು.

ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ತಾ.ಪಂ.ನಿಂದ ನೀಡಲಾಗುವ ಸಮವಸ್ತ್ರವನ್ನು ಜಿ.ಎಂ ಕೀರ್ತಿ, ದಯಾ ಕೆ., ನಿಖಿತಾ, ಋತಿಕ್,ನಳಿನಾ, ವಿಜೇತ, ಸಾನ್ವಿ ಎಸ್., ಧನ್ವಿ, ಚಂದನ್ ಕೆ.ವಿ. ಹಾಗೂ ಭರತ್ ಕುಮಾರ್ ಕುಮಾರ್‌ರವರಿಗೆ ಶಾಸಕರು ವಿತರಿಸಿದರು.ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರ ಠಾಣಾ ನಿರೀಕ್ಷಕ ಜಾನ್ಸನ್ ಡಿಸೋಜ ಉಪಸ್ಥಿತರಿದ್ದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಹಾರಾಡಿ ಹಿ.ಪ್ರಾ ಶಾಲೆ, ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆ, ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆ ಹಾಗೂ ಮುಂಡೂರು ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.