ಪುತ್ತೂರು: ಸಾಲಮನ್ನಾ ವಂಚಿತ ರೈತರ ಪ್ರತಿಭಟನೆ

| Published : Jul 26 2024, 01:36 AM IST

ಸಾರಾಂಶ

ಮುಂದಿನ ಒಂದು ತಿಂಗಳ ಒಳಗೆ ಜಿಲ್ಲೆಯ ಕೃಷಿಕರ ಸಾಲಮನ್ನಾ ಮಾಡದಿದ್ದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ, ಡಿಆರ್ ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

2017- ೨೦೧೮ ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಾಲ ಮನ್ನಾ ಯೋಜನೆಯು ಪೂರ್ಣವಾಗಿ ಕಾರ್ಯಗತಗೊಳ್ಳದಿರುವುದನ್ನು ಖಂಡಿಸಿ ಸಾಲಮನ್ನಾ ವಂಚಿತರಾದ ಸುಳ್ಯ, ಕಡಬ, ಪುತ್ತೂರು ಮತ್ತು ಬೆಳ್ತಂಗಡಿ ಪ್ರದೇಶಗಳ ರೈತರು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಕಿಸಾನ್ ಸಂಘದ ಸಹಯೋಗದೊಂದಿಗೆ ಗುರುವಾರ ಪುತ್ತೂರು ಸಹಾಯಕ ಸಹಕಾರಿ ನಿಬಂಧಕರ ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು ೨೦೧೮ರಲ್ಲಿ ರಾಜ್ಯ ಸರ್ಕಾರ ಕೃಷಿಕರ ಸಾಲಮನ್ನಾ ಮಾಡಿದ್ದು, ಈ ಸಾಲಮನ್ನಾದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಕೃಷಿಕರು ವಂಚಿತರಾಗಿದ್ದಾರೆ. ಅಂದಿನ ರಾಜ್ಯ ಸರ್ಕಾರ ಕೃಷಿಕರ ಸಾಲಮನ್ನಾ ಮಾಡಿತ್ತು. ಆದರೆ ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಈ ಅವಕಾಶದಿಂದ ದಕ್ಷಿಣಕನ್ನಡ ಜಿಲ್ಲೆಯ ಸಾವಿರಾರು ಕೃಷಿಕರು ವಂಚಿತರಾಗಿದ್ದಾರೆ. ಸಾಲಮನ್ನಾ ಮಾಡುವಂತೆ ವಂಚಿತ ಕೃಷಿಕರು ಹಲವು ಬಾರಿ ಅಧಿಕಾರಿಗಳ ಮತ್ತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರೂ, ಈವರೆಗೂ ಸಾಲಮನ್ನಾ ಸೌಲಭ್ಯದಿಂದ ಜಿಲ್ಲೆಯ ಕೃಷಿಕರನ್ನು ದೂರವಿಡಲಾಗಿದೆ. ಮುಂದಿನ ಒಂದು ತಿಂಗಳ ಒಳಗೆ ಜಿಲ್ಲೆಯ ಕೃಷಿಕರ ಸಾಲಮನ್ನಾ ಮಾಡದಿದ್ದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ, ಡಿಆರ್ ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯ ಬಳಿಕ ಮನವಿ ಸಲ್ಲಿಸಲಾಯಿತು. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಯಶೋಧರ ಕೊಣಾಜೆ, ಅಚ್ಯುತ ಭಟ್, ಕಿಸಾನ್ ಸಂಘದ ಸುಬ್ರಾಯ ಶೆಟ್ಟಿ, ಸುರೇಶ್ ನರಿಮೊಗರು ಸೇರಿದಂತೆ ಹಲವು ಮಂದಿ ಮುಖಂಡರು, ಫಲಾನುಭವಿಗಳು ಭಾಗವಹಿಸಿದ್ದರು.