ಪುತ್ತೂರು ತ್ಯಾಜ್ಯ ನಿರ್ವಹಣೆ ಅಸಮರ್ಪಕ: ನಗರಸಭೆ ಸದಸ್ಯರ ಆಕ್ರೋಶ

| Published : Mar 26 2025, 01:32 AM IST

ಸಾರಾಂಶ

ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಹಾಗೂ ತ್ಯಾಜ್ಯ ಸುಪರ್‌ವೈಸರ್‌ಗಳ ವಿರುದ್ದ ನಗರಸಭಾ ಸದಸ್ಯರು ಹಾಗೂ ಉಪಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ನಗರಾ ವ್ಯಾಪ್ತಿಯಲ್ಲಿ ಕಸತ್ಯಾಜ್ಯ ನಿರ್ವಹಣೆಯ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಕಸಗಳೂ ರಸ್ತೆಯಲ್ಲಿದೆ. ಸುಪರ್‌ವೈಸರ್‌ಗಳಿಗೆ ಸದಸ್ಯರು ದೂರವಾಣಿ ಕರೆ ಮಾಡಿದರೂ ಸ್ವೀಕಾರ ಮಾಡುತ್ತಿಲ್ಲ ಎಂದು ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಹಾಗೂ ತ್ಯಾಜ್ಯ ಸುಪರ್‌ವೈಸರ್‌ಗಳ ವಿರುದ್ದ ನಗರಸಭಾ ಸದಸ್ಯರು ಹಾಗೂ ಉಪಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭಾ ಸಾಮಾನ್ಯ ಸಭೆ ಮಂಗಳವಾರ ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಲೀಲಾವತಿ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಸ ವಿಲೇವಾರಿ ನಡೆಸದೆ ಇರುವುದರಿಂದ ನಗರದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಭಯ ಕಾಡುತ್ತಿದೆ. ಬೀದಿ ಬದಿಯಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಬಿಟ್ಟು ಹೋಗಿ. ನಿಮಗೆ ಜವಾಬ್ದಾರಿ ಇಲ್ಲವಾ ಎಂದು ಉಪಾಧ್ಯಕ್ಷ ಬಾಲಚಂದ್ರ ಮರೀಲ್ ಹಾಗೂ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಜೀವಂಧರ್ ಜೈನ್, ದೀಕ್ಷಾ ಪೈ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಕಸ ವಿಲೇವಾರಿಗಾಗಿ ಇರುವ ಇಬ್ಬರು ಸೂಪರ್‌ವೈಸರ್ ಗಳು ಸರಿಯಾಗಿ ಕೆಲಸವೇ ಮಾಡುತ್ತಿಲ್ಲ. ಪೌರಾಯುಕ್ತರನ್ನು ಅವರನ್ನು ಹದ್ದುಬಸ್ತಿನಲ್ಲಿಟ್ಟು ಕೆಲಸ ಮಾಡಿಸಿ ಎಂದು ಭಾಮಿ ಅಶೋಕ್ ಶೆಣೈ ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಪೌರ ಕಾರ್ಮಿಕರಿಬ್ಬರು ಕಳೆದ ಒಂದು ವರ್ಷದಿಂದ ರಜೆಯಲ್ಲಿದ್ದಾರೆ. ಇದ್ದವರಲ್ಲಿಯೂ ಕೆಲವರು ಬರುತ್ತಿಲ್ಲ. ಅನಧಿಕೃತವಾಗಿ ಗೈರು ಹಾಜರಾದವರಿಗೆ ೨ ಸಲ ನೋಟಿಸ್‌ ನೀಡಲಾಗಿದೆ. ಮೂರನೇ ನೋಟೀಸು ಕೊಟ್ಟರೂ ಬರದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಮಧು ಎಸ್ ಮನೋಹರ್ ಎಚ್ಚರಿಕೆ ನೀಡಿದರು. ನೋಟೀಸು ನೀಡಿದರೂ ಬರದಿದ್ದರೆ ಅಂತವರನ್ನು ತೆಗೆದು ಹಾಕಿ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಭಾಮಿ ಅಶೋಕ್ ಶೆಣೈ ಹೇಳಿದರು.

ನಳ್ಳಿ ನೀರಿನ ಸಂಪರ್ಕ ಕಡಿತಗೊಂಡು ಪುನಃ ಸಂಪರ್ಕ ಮಾಡುವವರಿಗೆ ದುಬಾರಿ ಹಣ ತೆರಬೇಕಾದ ಸ್ಥಿತಿ ಇದೆ. ತೆಂಕಿಲ, ಜಿಡೆಕಲ್ಲಿನಲ್ಲಿ ಎರಡು ಕುಟುಂಬಗಳಿಗೆ ೧೬ ಸಾವಿರ ರು.ಅಧಿಕ ಮೊತ್ತ ನೀಡುವಂತೆ ತಿಳಿಸಲಾಗಿದೆ. ನಿಯಮ ಪ್ರಕಾರ ಮನೆ ವಠಾರದ ನಳ್ಳಿ ಅಳವಡಿಸಿರುವ ಸ್ಥಳದ ತನಕ ಪೈಪ್ ಅಳವಡಿಸುವುದು ಜಲಸಿರಿಯ ಕೆಲಸ. ಅಲ್ಲಿಂದ ಮನೆಗೆ ಸಂಪರ್ಕ ಕಲ್ಪಿಸುವುದು ಫಲಾನುಭವಿಯ ಕೆಲಸ. ಆದರೆ ಜಲಸಿರಿ ತಾನೂ ಅಳವಡಿಸಬೇಕಾದ ಪೈಪ್‌ಗೆ ಫಲಾನುಭವಿಯಿಂದ ಹಣ ವಸೂಲಿ ಮಾಡುವುದು ಎಷ್ಟು ಸರಿ ಎಂದು ಭಾಮಿ ಅಶೋಕ್ ಶೆಣೈ ಪ್ರಶ್ನಿಸಿದರು.

ಜಲಸಿರಿ ಕಾಮಗಾರಿ ಅಸಮರ್ಪಕತೆಯ ವಿರುದ್ಧ ಸದಸ್ಯರಾದ ಶೈಲಾ ಪೈ, ಪದ್ಮನಾಭ ನಾಯ್ಕ ಧ್ವನಿ ಎತ್ತಿದರು. ಹೊಂಡ ತೆಗೆದು ಹೋಗಿ ಸಮಸ್ಯೆ ಸೃಷ್ಟಿಯಾಗಿರುವುದು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿ ವಿರುದ್ಧ ಶೈಲಾ ಪೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಳಿಕ ಪೌರಯುಕ್ತರು ಅವರನ್ನು ಸಮಾಧಾನಪಡಿಸಿ ಸಂಜೆಯೊಳಗೆ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.

ಬನ್ನೂರು ಡಂಪಿಂಗ್ ಯಾರ್ಡ್ ನಲ್ಲಿ ನೆಲಭರ್ತಿ ತ್ಯಾಜ್ಯ ಸಂಸ್ಕರಣಾ ಜಾಗದಲ್ಲಿರುವ ಬಯೋಗ್ಯಾಸ್ ಘಟಕದ ಹಿಂಬಾಗದಲ್ಲಿರುವ ಬರೆ ಕುಸಿತಗೊಳ್ಳುತ್ತಿದ್ದು, ಬಯೋಗ್ಯಾಸ್ ಘಟಕದ ಸುರಕ್ಷಣೆಯ ನಿಟ್ಟಿನಲ್ಲಿ ಇಲ್ಲಿ ತಡೆಗೋಡೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಡೆಗೋಡೆ ಕಾಮಗಾರಿ ಅಂದಾಜು ಪಟ್ಟಿಯಂತೆ ರು. ೨೫ ಲಕ್ಷ ವಿನಿಯೋಗಿಸಲು ಅನುಮೋದನೆ ನೀಡಲಾಯಿತು. ಈ ಮೊತ್ತವನ್ನು ನಗರಸಭಾ ನಿಧಿಯಿಂದ ಭರಿಸಲು ನಿರ್ಣಯಿಸಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಇದ್ದರು. ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.