ಮಂಗಳೂರಿನಲ್ಲಿ ೧೮ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಕರಾವಳಿಯ ಹಲವಾರು ಬೇಡಿಕೆಗಳಿಗೆ ಈ ಸಭೆಯು ಸಾಕ್ಷಿಯಾಗಲಿದೆ. ಪುತ್ತೂರಿನ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರೊಂದಿಗೆ ಪುತ್ತೂರು ಸರ್ಕಾರಿ ಆಯುರ್ವೇದ ಕಾಲೇಜ್ ಕನಸು ಸಚಿವ ಸಂಪುಟ ಸಭೆಯಲ್ಲಿ ನನಸಾಗುವ ನಿರೀಕ್ಷೆಯಿದೆ.
ಪುತ್ತೂರು: ಮಂಗಳೂರಿನಲ್ಲಿ ೧೮ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಕರಾವಳಿಯ ಹಲವಾರು ಬೇಡಿಕೆಗಳಿಗೆ ಈ ಸಭೆಯು ಸಾಕ್ಷಿಯಾಗಲಿದೆ. ಪುತ್ತೂರಿನ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರೊಂದಿಗೆ ಪುತ್ತೂರು ಸರ್ಕಾರಿ ಆಯುರ್ವೇದ ಕಾಲೇಜ್ ಕನಸು ಸಚಿವ ಸಂಪುಟ ಸಭೆಯಲ್ಲಿ ನನಸಾಗುವ ನಿರೀಕ್ಷೆಯಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ದ.ಕ. ಜಿಲ್ಲೆಯವರೇ ಆಗಿರುವುದರಿಂದ ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಯ ಕನಸು ನನಸಾಗುವುದು ಖಚಿತವೆನಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಆಯುಷ್ ಆಸ್ಪತ್ರೆಗೆ ಮಂಜೂರಾತಿ ದೊರಕಿದರೆ ಆಯುರ್ವೇದ ವೈದ್ಯಕೀಯ ಕಾಲೇಜ್ ಬೇಡಿಕೆ ಪೂರ್ಣಗೊಂಡಂತಾಗುತ್ತದೆ.೫ ಎಕ್ರೆ ಜಮೀನು ಕಾಯ್ದಿರಿಸುವಿಕೆ: ಆಯುಷ್ ಆಸ್ಪತ್ರೆಯ ನಿರ್ಮಾಣಕ್ಕೆಂದು ಜಮೀನು ಕಾದಿರಿಸಲಾಗಿದೆ. ಪುತ್ತೂರು ಬನ್ನೂರು ಕುಂಟ್ಯಾನದ ಸರ್ವೆ ನಂ.೮೪ರಲ್ಲಿ 5 ಎಕರೆ ಜಮೀನನ್ನು ದ.ಕ. ಜಿಲ್ಲಾ ಆಯುಷ್ ಇಲಾಖೆಯ ಹೆಸರಿಗೆ ಕಾಯ್ದಿರಿಸಲಾಗಿದೆ. ಇದರಲ್ಲಿ ಪುತ್ತೂರು ಶಾಸಕ ರೈ ಅವರ ಪ್ರಯತ್ನ ಸಾಕಷ್ಟಿದೆ. ೨ನೇ ಹಂತದಲ್ಲಿ ಆಯುಷ್ ಆಸ್ಪತ್ರೆಗೆ ರಾಜ್ಯ ಸಚಿವ ಸಂಪುಟದ ಮಂಜೂರಾತಿ ಅಗತ್ಯ. ಆಯುರ್ವೇದ ಆಸ್ಪತ್ರೆ ನಿರ್ಮಾಣವಾದರೆ ಕೇಂದ್ರ ಸರ್ಕಾರವೂ ಆಯುರ್ವೇದ ಕಾಲೇಜ್ ನಿರ್ಮಾಣಕ್ಕೆ ಸಹಕಾರ ನೀಡಲಿದೆ.
ಆಸ್ಪತ್ರೆ ಅಗತ್ಯ: ಆಯುರ್ವೇದ ಅಸ್ಪತ್ರೆ ನಿರ್ಮಾಣಕ್ಕಾಗಿ ಪುತ್ತೂರಿನಲ್ಲಿ ೫ ಎಕ್ರೆ ಜಮೀನು ಮಂಜೂರಾಗಿದೆ ಎಂದ ಮಾತ್ರಕ್ಕೆ ವೈದ್ಯಕೀಯ ಕಾಲೇಜ್ ಸಿಕ್ಕಿತು ಎನ್ನಲಾಗದು. ಕಾಲೇಜ್ ನಿರ್ಮಾಣವಾಗಬೇಕಾದರೆ ಅಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ನಿಯಮವಿದೆ. ಕಾಯ್ದಿರಿಸಲಾಗಿರುವ ಜಾಗದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ ಆರಂಭಗೊಂಡರೆ ಆಯುರ್ವೇದ ಕಾಲೇಜ್ ಆರಂಭ ಹಾದಿ ಸುಗಮವಾಗಲಿದೆ. ಕೇಂದ್ರದ ಎನ್‌ಸಿಐಎಸ್‌ಎಂ ಆಸ್ಪತ್ರೆ ಆರಂಭಗೊಂಡ ೨ ವರ್ಷಗಳ ಬಳಿಕ ಯೋಜನಾ ವರದಿ ಸಲ್ಲಿಸಬೇಕು. ಈ ಯೋಜನಾ ವರದಿಗೆ ಮಂಜೂರಾತಿ ದೊರಕಿದಲ್ಲಿ ಮಾತ್ರ ಆಯುರ್ವೇದ ವೈದ್ಯಕೀಯ ಕಾಲೇಜ್ ಆರಂಭಿಸಲು ಸಾಧ್ಯತೆಯಿದೆ.ಅಭಿಯಾನ: ೨೦೨೨ರಿಂದಲೇ ಪುತ್ತೂರಿನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜ್ ಮತ್ತು ಆಯುಷ್ ಆಸ್ಪತ್ರೆ ಪ್ರಾರಂಭಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಪೂರಕವಾಗಿ ಡಾ. ನವೀನ್ ಕುಳಮರ್ವ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದರು. ಸಂಸದ ಚೌಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸೇರಿದಂತೆ ೩೦ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಪತ್ರ ಬರೆದು ಈ ಬಗ್ಗೆ ಒತ್ತಾಯಿಸಿದ್ದಾರೆ
ಸಚಿವರಿಗೆ ಪತ್ರ: ಬನ್ನೂರಿನಲ್ಲಿ ಆಯುರ್ವೇದ ಆಸ್ಪತ್ರೆ ನಿರ್ಮಾಣಕ್ಕಾಗಿ ಮಂಜೂರಾತಿ, ಮೂಲಸೌಕರ್ಯಕ್ಕಾಗಿ ಪುತ್ತೂರು ಶಾಸಕ ಅಶೋಕ್ ರೈ ಅವರು ಆರೋಗ್ಯ ಸಚಿ ಯು.ಟಿ. ಖಾದರ್ ಗೆ ಪತ್ರ ಬರೆದಿದ್ದಾರೆ. ಪುತ್ತೂರಿನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜ್ ಮತ್ತು ಆಯುಷ್ ಆಸ್ಪತ್ರೆ ನಿರ್ಮಾಣ ಮಾಡುವ ಸ್ಥಳೀಯ ಶಾಸಕರ, ಇತರ ಹಿರಿಯ ಅಧಿಕಾರಿಗಳ ಪ್ರಯತ್ನಕ್ಕೆ ಜಿಲ್ಲಾ ಆಯುಷ್ ಇಲಾಖೆ ಕೈ ಜೋಡಿಸಿದೆ. ಅಗತ್ಯವಿರುವ ದಾಖಲೆಗಳ ತಯಾರಿ, ಪತ್ರ ವ್ಯವಹಾರ ನಡೆಸಲಾಗುತ್ತಿದೆ.-ಡಾ. ಮುರಲೀಧರ್ ಎ. ದ.ಕ. ಜಿಲ್ಲಾ ಆಯುಷ್ ಅಧಿಕಾರಿ
ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಷ್ಟೇ ಸರ್ಕಾರಿ ಆಯುರ್ವೇದ ಕಾಲೇಜ್‌ಗಳಿವೆ. ಪ್ರದೇಶವಾರು ವಿಂಗಡಣೆಯ ಅನುಸಾರ ಕರಾವಳಿ ಭಾಗದಲ್ಲಿ ಸರ್ಕಾರಿ ಆಯುರ್ವೇದ ಕಾಲೇಜ್ ಇಲ್ಲ. ಮಾತ್ರವಲ್ಲದೆ, ದ.ಕ. ಜಿಲ್ಲೆಯಲ್ಲಿ ಕೇವಲ ೭ ಆಯುರ್ವೇದ ಔಷಧಾಲಯಗಳು ಮಾತ್ರವಿದೆ. ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆ, ಕಾಲೇಜ್ ಆರಂಭಿಸಲು ಸೂಕ್ತ ಸ್ಥಳ.-ಡಾ. ನವೀನ್ ಕುಳಮರ್ವ ಆಯುರ್ವೇದ ಉಪನ್ಯಾಸಕರು.