ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುಲಾಲ ಸೇವಾಸಂಘದ ಆಶ್ರಯದಲ್ಲಿ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ದಿನಾಚರಣೆ
ಪುತ್ತೂರು: ಬದುಕಿನಲ್ಲಿ ಜಾತಿ ಕಂದಾಚಾರಗಳನ್ನು ದೂರ ಇಡಬೇಕಾದ ಅಗತ್ಯತೆಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾಮೇಧಾವಿ ತತ್ವಜ್ಞಾನಿ ದಾರ್ಶನಿಕ ಸರ್ವಜ್ಞನ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಪ್ರಸ್ತುತತೆ ಆಗಿದೆ. ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಚಿಂತನೆಗಳು ಸರ್ವಜ್ಞ ನಮಗೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ ಎಂದು ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುಲಾಲ ಸೇವಾಸಂಘದ ಆಶ್ರಯದಲ್ಲಿ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಮಾತನಾಡಿ, ಸರ್ವಜ್ಞ ಅವರ ಪ್ರತಿಯೊಂದು ತ್ರಿಪದಿಗಳೂ ಹೃದಯಕ್ಕೆ ಅತ್ಯಂತ ಸಮೀಪವಾಗಿದೆ. ಮೇಲು ಕೀಳು ಜಾತಿ ವೈಷಮ್ಯದಿಂದ ಸಮಾಜದ ಅವನತಿಯಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ನಮ್ಮ ಬದುಕನ್ನು ಚಿಂತನೆಗೆ ಹಚ್ಚುವಂತೆ ಮಾಡಿದ ಸರ್ವಜ್ಞನ ವಚನಗಳು ಇಂದಿಗೂ ಮುಂದಿನ ಜನಾಂಗಕ್ಕೂ ಅತ್ಯಂತ ಪ್ರಸ್ತುತ. ಆದರೆ ಅವರಲ್ಲಿ ನಿಜವಾದ ಚಿಂತನೆಗಳನ್ನು ಅರಿತುಕೊಳ್ಳುವಲ್ಲಿ ಯುವಜನಾಂಗ ತಪ್ಪಿರುವುದು ನೋವಿನ ವಿಚಾರವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿದ ಸಂತಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಅವರು, ದಾರ್ಶನಿಕರ ಮತ್ತು ರಾಜಾಧಿರಾಜರ ದೇದೀಪ್ಯಮಾನವಾದ ಚರಿತ್ರೆಯ ಮೂಲಕ ಭಾರತ ಜಗತ್ತಿನಲ್ಲಿಯೇ ವಿಶಿಷ್ಟಸ್ಥಾನ ಪಡೆದಿದೆ. ಕನ್ನಡದ ಕಾವ್ಯಗಳ ಜನಕನಾಗಿರುವ ಸರ್ವಜ್ಞ ಜನಸಾಮಾನ್ಯರ ಆಡುಭಾಷೆಯಲ್ಲಿ ಜಾತಿಪದ್ಧತಿ ಅನಿಷ್ಟತೆಗಳ ವಿರುದ್ಧ ಸಮರ ಸಾರಿದವರು. ಎಲ್ಲರೂ ಕಾಲಕೆಟ್ಟಿದೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಕಾಲಕೆಟ್ಟಿಲ್ಲ ಬದಲಾಗಿ ಕಾಲ ಬದಲಾಗಿದೆ. ಈ ಬದಲಾವಣೆಗೆ ನಮ್ಮನ್ನು ತೆರೆದುಕೊಳ್ಳುವ ಅಗತ್ಯತೆ ಇದೆ. ಯುವಜನತೆಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದರು.ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಕುಲಾಲ ಸೇವಾಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಉಪಸ್ಥಿತರಿದ್ದರು.ಕಂದಾಯ ಇಲಾಖೆಯ ದಯಾನಂದ ಡಿ.ಟಿ ಸ್ವಾಗತಿಸಿದರು. ಉಪತಹಸೀಲ್ದಾರ್ ರವಿ ಕುಮಾರ್ ನಾಡಗೀತೆ ಹಾಡಿದರು. ಕಂದಾಯ ಇಲಾಖೆಯ ಶ್ರೀಕಲಾ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಕಂದಾಯ ಇಲಾಖೆಯ ಶಿವಾನಂದ ನಾಟೇಕರ್, ರಮೇಶ್, ಜಯಪ್ರಕಾಶ್, ಸರ್ವೆ ಇಲಾಖೆಯ ಮೋಹನ್, ಪ್ರಮೋದ್ ಹಾಗೂ ಆಹಾರ ಇಲಾಖೆ ಜಿತೇಶ್, ಸಿಡಿಪಿಒ ಹರೀಶ್ ಕುಮಾರ್, ಉಪತಹಸೀಲ್ದಾರ್ ಸುಲೋಚನಾ ಮತ್ತು ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.