ಸಂಶುದ್ದೀನ್ ಸಂಪ್ಯ

ಕನ್ನಡಪ್ರಭವಾರ್ತೆ ಪುತ್ತೂರು

ಪುತ್ತೂರಿನ ಹೃದಯ ಭಾಗದಲ್ಲಿರುವ ನ್ಯಾಯಾಲಯ ಕಟ್ಟಡವು ಆನೆ ಮಜಲು ಎಂಬಲ್ಲಿಗೆ ಸ್ಥಳಾಂತಗೊಂಡಿರುವ ಕಾರಣ ಹಳೆಯ ಕಟ್ಟಡದಲ್ಲಿ ಸ್ವಂತಕಟ್ಟಡಗಳಿಲ್ಲದ ಸರ್ಕಾರಿ ಕಚೇರಿಗಳಿಗೆ ಅವಕಾಶ ನೀಡಿದಲ್ಲಿ ಉತ್ತಮ ಎಂಬ ಅಭಿಪ್ರಾಯ ಕೇಳಿಬಂದಿದೆ.ಸುಮಾರು ಶತ ವರ್ಷಗಳಿಂದ ಪುತ್ತೂರು ನಗರದೊಳಗೆ ಕಾರ್ಯಾಚರಿಸುತ್ತಿದ್ದ ನ್ಯಾಯಾಲಯವು ಆರು ಕಿ.ಮೀ.ದೂರದ ಅನೆಮಜರಿಗೆ ಸ್ಥಳಾಂತರಗೊಂಡಿದೆ. ಆನೆಮಜಲಿನಲ್ಲಿ ರು. ೫೧ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯದ ಕಟ್ಟಡವು ಜ. ೩೧ರಂದು ಉದ್ಘಾಟನೆಗೊಂಡಿದೆ. ನಗರದ ತಾ.ಪಂ ಕಟ್ಟಡ, ಕಿಲ್ಲೆ ಮೈದಾನ ಸಮೀಪ ಕಳೆದ ೩೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಆರು ನ್ಯಾಯಾಲಯ ಸಹಿತ ಹೊಸದಾಗಿ ಸೇರ್ಪಡೆಗೊಂಡ ಏಳನೇ ನ್ಯಾಯಾಲಯವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯಾರಂಭಿಸಿದೆ. ವಿಸ್ತಾರವಾದ ನ್ಯಾಯಾಲಯದ ಹಳೆ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಬೆನ್ನಲ್ಲೇ ದಶಕಗಳಿಂದ ಸ್ವಂತ ಕಚೇರಿ ಕಟ್ಟಡಕ್ಕೆ ಕಾಯುತ್ತಿರುವ ಹಲವು ಸರ್ಕಾರಿ ಇಲಾಖೆಗಳು ಈ ಹಳೆ ನ್ಯಾಯಾಲಯದ ಕಟ್ಟಡದತ್ತ ಆಸೆಗಣ್ಣಿನಿಂದ ನೋಡುತ್ತಿವೆ.ಹಳೆಯ ನ್ಯಾಯಾಲಯದ ಕಟ್ಟಡವು ವಿಸ್ತಾರವಾಗಿದ್ದು ಹಲವು ಕೊಠಡಿಗಳನ್ನು ಒಳಗೊಂಡಿದೆ. ಇದರೊಂದಿಗೆ ಇಲ್ಲಿದ್ದ ವಕೀಲರ ಕಚೇರಿಯೂ ಸ್ಥಳಾಂತರಗೊಂಡು ಖಾಲಿಯಾಗಿದೆ. ಇಲಾಖಾ ಕಚೇರಿ ಹಾಗೂ ಶಾಲಾ ಕಾಲೇಜು ಕಾರ್ಯನಿರ್ವಹಣೆಗೆ ಪೂರಕವಾದ ರೀತಿಯಲ್ಲಿ ಈ ಕಟ್ಟಡ ಇದ್ದು ನಗರದ ಕೇಂದ್ರ ಸ್ಥಾನ ದಲ್ಲಿರುವ ಕಾರಣ ಸಹಜವಾಗಿ ಬೇಡಿಕೆ ಸೃಷ್ಟಿಯಾಗಿದೆ.

ಹಲವು ಇಲಾಖೆ ಬಾಡಿಗೆ ಕಟ್ಟಡದಲ್ಲಿ: ಪುತ್ತೂರಿನಲ್ಲಿ ಹಲವು ಇಲಾಖೆಗಳು ಇದೀಗ ತಾಲೂಕು ಆಡಳಿತ ಸೌಧದ ಒಳಭಾಗದಲ್ಲಿ ಒಂದೇ ಸೂರಿನಡಿಗೆ ಬಂದಿದೆ. ಆದಾಗ್ಯೂ ತಾಲೂಕಿನ ಬಹಳಷ್ಟು ಸರ್ಕಾರಿ ಇಲಾಖೆಗಳು ಬಾಡಿಗೆ ಕಟ್ಟಡ ಮತ್ತು ಇತರ ಇಲಾಖೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಐಟಿಡಿಪಿ ಇಲಾಖೆ, ಅಲ್ಪಸಂಖ್ಯಾಕ ಇಲಾಖೆ ಹಾಗೂ ಇನ್ನಿತರ ಇಲಾಖೆಗಳು ಸ್ವಂತ ನಿವೇಶನಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೆಲ ಇಲಾಖೆಗಳು ದಶಕಗಳಿಂದ ಮನವಿ ಸಲ್ಲಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈಗ ಹಳೆ ಕೋರ್ಟ್ ಕಟ್ಟಡದಲ್ಲಿ ಕಚೇರಿಗಳಿಗೆ ಅವಕಾಶ ಇದೆ. ಈ ಕಟ್ಟಡವೂ ಮಿನಿ ವಿಧಾನಸೌಧದ ಬಳಿಯಲ್ಲೇ ಇರುವ ಕಾರಣ ಜನರಿಗೂ ಎಲ್ಲ ಕಚೇರಿಗಳು ಒಂದೇ ಕಡೆ ಸಿಗಲಿದೆ ಅನ್ನುವುದು ಮುಖ್ಯ ಕಾರಣವಾಗಿದೆ.ಹಳೆ ನ್ಯಾಯಾಲಯ ಕಟ್ಟಡವನ್ನು ನ್ಯಾಯಾಂಗ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲು ವ್ಯವಸ್ಥೆಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದ್ದು, ಈ ಕಾರ್ಯ ಈಗಾಗಲೇ ಜಿಲ್ಲಾಧಿಕಾರಿ ಹಂತಕ್ಕೆ ಬಂದಿದ್ದು, ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾದ ಅನಂತರ ಅವರ ಮೂಲಕ ಅಗತ್ಯವಿರುವ ಇಲಾಖೆಗಳಿಗೆ ನೀಡಬಹುದಾಗಿದೆ. ಯಾರಿಗೆ ನೀಡಬೇಕು ಅನ್ನುವುದು ಇಲಾಖೆಯ ಹಂತದಲ್ಲಿ ನಿರ್ಧಾರವಾಗಲಿದೆ.

ಹಳೆ ಕೋರ್ಟ್ ಕಟ್ಟಡ ಖಾಲಿಯಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಯಾವುದಕ್ಕೆ ಬಳಕೆ ಮಾಡಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು


ಸ್ವಂತ ಕಚೇರಿ ಹೊಂದಿಲ್ಲದ ಸರಕಾರಿ ಇಲಾಖೆಗಳಿಗೆ ಖಾಲಿಯಾಗಿರುವ ಕೋರ್ಟ್ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಡಬೇಕು. ಇದರಿಂದ ಸರಕಾರ ಕೊಡುವ ಬಾಡಿಗೆ ಹಾಗೂ ಸಾರ್ವಜನಿಕರಿಗೆ ಆಗುವ ಅನನುಕೂಲವನ್ನು ತಪ್ಪಿಸಬಹುದು. ಲೋಕೋಪಯೋಗಿ ಇಲಾಖೆ, ನ್ಯಾಯಾಂಗ ಇಲಾಖೆ ಮತ್ತು ಬಾರ್ ಅಸೋಸಿಯೇಶನ್ ಜತೆ ಮಾತುಕತೆ ಮಾಡಿ ಈ ಇಲಾಖೆಗಳನ್ನು ಹಳೆ ಕೋರ್ಟ್ ಕಟ್ಟಡಗಳ ಸಂಕೀರ್ಣಕ್ಕೆ ಸ್ಥಳಾಂತರ ಮಾಡಬೇಕು ಎಂದು. ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ.ಸಂಜೀವ ಮಠಂದೂರು, ಮಾಜಿ ಶಾಸಕರು, ಪುತ್ತೂರು