ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು ಕ್ಷೇತ್ರಾಧಾರಿತ ಅನುಭವಾತ್ಮಕ ಕಲಿಕೆಯ ಭಾಗವಾಗಿ ೩೦ರಂದು ಪುತ್ತೂರಿನ ವಿವಿಧ ಪೊಲೀಸ್ ಠಾಣೆಗಳಿಗೆ ಅಧ್ಯಯನ ಭೇಟಿ ನೀಡಿದರು.

ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು ಕ್ಷೇತ್ರಾಧಾರಿತ ಅನುಭವಾತ್ಮಕ ಕಲಿಕೆಯ ಭಾಗವಾಗಿ ೩೦ರಂದು ಪುತ್ತೂರಿನ ವಿವಿಧ ಪೊಲೀಸ್ ಠಾಣೆಗಳಿಗೆ ಅಧ್ಯಯನ ಭೇಟಿ ನೀಡಿದರು. ವಿದ್ಯಾರ್ಥಿಗಳು ಮಹಿಳಾ ಪೊಲೀಸ್ ಠಾಣೆ, ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಅಪರಾಧ ನ್ಯಾಯ ವ್ಯವಸ್ಥೆ, ಸಮುದಾಯ ಪೊಲೀಸ್ ವ್ಯವಸ್ಥೆ ಹಾಗೂ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಕಾನೂನು ಜಾರಿ ವ್ಯವಸ್ಥೆಗಳ ಕುರಿತು ಪ್ರಾಯೋಗಿಕ ಅರಿವು ಪಡೆದರು.

ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳ ನಿರ್ವಹಣೆ, ಕೌಟುಂಬಿಕ ಕಲಹಗಳ ಪರಿಹಾರ, ಕುಟುಂಬ ಸಮಾಲೋಚನಾ ವ್ಯವಸ್ಥೆ ಕಾನೂನುಗಳ ಕುರಿತೂ ವಿವರಿಸಲಾಯಿತು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ವಿಧಾನ, ಠಾಣೆಯ ಅಪರಾಧ ದಾಖಲೆಗಳ ನಿರ್ವಹಣೆ, ತನಿಖಾ ಪ್ರಕ್ರಿಯೆಗಳು, ಮುನ್ನೆಚ್ಚರಿಕಾ ಪೊಲೀಸ್ ಕ್ರಮಗಳು ಹಾಗೂ ಲಾಕ್‌ಅಪ್ ನಿರ್ವಹಣೆ ಕುರಿತು ನೇರವಾಗಿ ತಿಳಿದುಕೊಂಡರು.

ಎಂಎಸ್‌ಡಬ್ಲ್ಯು ವಿಭಾಗದ ಅಧ್ಯಾಪಕರು ಅಧ್ಯಯನ ಭೇಟಿಯುದ್ದಕ್ಕೂ ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.