ಪುತ್ತೂರಿನ ಸಂತ ಫಿಲೋಮೀನಾ (ಸ್ವಾಯತ್ತ) ಕಾಲೇಜಿನಲ್ಲಿ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ
ಪುತ್ತೂರು: ಮಕ್ಕಳಲ್ಲಿ ಪ್ರಶ್ನಿಸುವ ಅಭ್ಯಾಸ ಬೆಳೆಯಬೇಕು. ಅವರಿಗೆ ಮೂಲಭೂತ ಅಗತ್ಯಗಳು ದೊರೆಯುವಂತಾಗಬೇಕು. ಅವರು ಉತ್ತಮ ಕೆಲಸ ಹಾಗೂ ಉತ್ತಮ ಜೀವನದತ್ತ ಸಾಗಲು ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಮಕ್ಕಳ ಪ್ರಶ್ನೆಗಳಿಗೆ ನಾವು ಸರಿಯಾದ ಉತ್ತರಗಳನ್ನು ನೀಡಬೇಕಾಗಿದೆ ಎಂದು ವಂ. ಡಾ. ಜಾನ್ ಬಿ. ಸಲ್ದಾನ್ಹಾ ಅಭಿಪ್ರಾಯಪಟ್ಟರು.
ಅವರು ಪುತ್ತೂರಿನ ಸಂತ ಫಿಲೋಮೀನಾ (ಸ್ವಾಯತ್ತ) ಕಾಲೇಜಿನಲ್ಲಿ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಂಗ ಸಮಾನತೆಯ ಅಗತ್ಯತೆಯ ಬಗ್ಗೆ ತಿಳಿಸಿದ ಅವರು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಅಗತ್ಯವಿದೆ ಎಂದು ಹೇಳಿದರು.ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ಅವರು `ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಪೋಷಕರ ಕಾಳಜಿ ಎಂಬ ವಿಷಯದ ಕುರಿತು ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ, ಜೀವನಪ್ರಜ್ಞೆ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳ ಬಗ್ಗೆ ಪೋಷಕರು ಅತಿಯಾದ ಕಾಳಜಿ ವಹಿಸುವ ಅಗತ್ಯವಿಲ್ಲ; ಬದಲಾಗಿ ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವಂತೆ ಬೆಳೆಸಬೇಕು. ಕೆಲವು ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳು ಹಾಗೂ ಮನೋಭಾವವನ್ನು ತಿಳಿದುಕೊಳ್ಳಲು ಸೂಕ್ತ ಗಮನ ಹರಿಸುವುದಿಲ್ಲ. ಮಕ್ಕಳು ದಾರಿ ತಪ್ಪಿದ ಬಳಿಕ ಅವರನ್ನು ಸರಿದಾರಿಗೆ ತರುವುದು ಕಷ್ಟವಾಗುತ್ತದೆ. ಪೋಷಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂದು ಸಲಹೆ ನೀಡಿ, ಮಕ್ಕಳಿಗೆ ಬೀಗುವುದನ್ನಲ್ಲ, ಬಗ್ಗುವುದನ್ನು ಕಲಿಸಬೇಕು. ಈ ಮೌಲ್ಯಗಳು ಅವರಲ್ಲಿ ಮೂಡಬೇಕು. ಇದರಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶ ದೊರೆಯುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಜೀವನದಲ್ಲಿ ನಾನು ಏನನ್ನೋ ಸಾಧಿಸುತ್ತಿದ್ದೇನೆ ಎಂಬ ಆತ್ಮ ಸಂತೃಪ್ತಿಯ ಜೀವನವನ್ನು ಕಟ್ಟಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಆ್ಯಂಟನಿ ಪ್ರಕಾಶ್ ಮೊಂತೇರೊ ಪ್ರಸ್ತಾವಿಕ ಮಾತುಗಳನ್ನಾಡಿದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ರೈ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಪ್ರೇಮಲತಾ ಕೆ. ಆಯವ್ಯಯ ಪತ್ರ ಮಂಡಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ವಿ. ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ನಡೆಯಿತು.ನೂತನ ಅಧ್ಯಕ್ಷರಾಗಿ ಸತೀಶ್ ನಾಯ್ಕ್, ಕಡಬ , ಉಪಾಧ್ಯಕ್ಷರಾಗಿ ಮೀನಾಕ್ಷಿ ವಿ. ರೈ ಆಯ್ಕೆಯಾದರು. ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ರೋಷನ್ ಲಾಸ್ರದೋ ಉಪಸ್ಥಿತರಿದ್ದರು. ವಾರಿಜ ಎಂ. ಮತ್ತು ಬಳಗ ಪ್ರಾರ್ಥಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ಅಬೂಬಕರ್ ಆರ್ಲಪದವು ಸ್ವಾಗತಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ವಂದಿಸಿದರು. ಶಿವಾನಿ ಮಲ್ಯ ಎನ್. ನಿರೂಪಿಸಿದರು.