ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಎಂಸಿಎ ವಿಭಾಗ ಏರ್ಪಡಿಸಿದ್ದ ವಿಕಸಿತ ಗ್ರಾಮ ಎನ್ನುವ ಪರಿಕಲ್ಪನೆಯ ಪ್ರಾಜೆಕ್ಟ್ ಗಳ ಪ್ರದರ್ಶನ ತಂತ್ರೋತ್ಸವ-೨೦೨೬ಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುತ್ತೂರು: ಯುವ ಮನಸ್ಸುಗಳು ಕೇವಲ ಪುಸ್ತಕದ ವಿಷಯಗಳಿಗೆ ಸೀಮಿತವಾಗದೆ ತಾವು ಕಲಿತದ್ದನ್ನು ಪ್ರಾಯೋಗಿಕವಾಗಿ ಬಳಸಿ ಅದನ್ನು ಸಮಾಜದ ಉನ್ನತಿಗೆ ಉಪಯೋಗಿಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಎಂಸಿಎ ವಿಭಾಗ ಏರ್ಪಡಿಸಿದ್ದ ವಿಕಸಿತ ಗ್ರಾಮ ಎನ್ನುವ ಪರಿಕಲ್ಪನೆಯ ಪ್ರಾಜೆಕ್ಟ್ ಗಳ ಪ್ರದರ್ಶನ ತಂತ್ರೋತ್ಸವ-೨೦೨೬ಕ್ಕೆ ಚಾಲನೆ ನೀಡಿ ಮಾತನಾಡಿದರು.ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸೃಜನಶೀಲತೆ ಮತ್ತು ನಾವೀನ್ಯತೆಗಳ ಅನಾವರಣಕ್ಕೆ ಇಂತಹ ಪ್ರದರ್ಶನಗಳುಸಹಕಾರಿಯಾಗುತ್ತವೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಕೆ. ಮಾತನಾಡಿ, ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಪ್ರತಿಯೊಂದು ಮಾಡೆಲ್‌ಗಳ ಹಿಂದೆ ವಿದ್ಯಾರ್ಥಿಗಳ ಯೋಚನೆ ಮತ್ತು ಯೋಜನೆಗಳಿವೆ. ಪರಿಸರ ಸ್ನೇಹಿ ತಂತ್ರಜ್ಞಾನದಿಂದ ಹಿಡಿದು ರೋಬೋಟಿಕ್ಸ್‌ವರೆಗಿನ ಪ್ರಾಜೆಕ್ಟ್‌ಗಳನ್ನು ತಯಾರಿಸಿ ತಮ್ಮ ಆಲೋಚನೆಗಳನ್ನು ವಾಸ್ತವಿಕ ರೂಪಕ್ಕೆ ತಂದಿದ್ದಾರೆ. ಈ ವಿದ್ಯಾರ್ಥಿಗಳ ೫ ಯೋಜನೆಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರದರ್ಶನಕ್ಕೆ ಆಯ್ಕೆಗೊಂಡಿವೆ ಎಂದು ಹೇಳಿದರು.
ಏ. ೧೬ರಂದು ಎಂಸಿಎ ವಿಭಾಗದ ಆಶ್ರಯದಲ್ಲಿ ಬಿಸಿಎ ಹಾಗೂ ಬಿಎಸ್‌ಸಿ ವಿದ್ಯಾರ್ಥಿಗಳಿಗಾಗಿ ನಡೆಯುವ ರಾಷ್ಟ್ರ ಮಟ್ಟದ ತಾಂತ್ರಿಕ ಉತ್ಸವ ಆಂತರ್ಯ-೨ ಇದರ ಭಿತ್ತಿಪತ್ರವನ್ನು ಈಸಂದರ್ಭ ಬಿಡುಗಡೆಗೊಳಿಸಲಾಯಿತು. ಇದರ ಬಗ್ಗೆ ಪೂರಕ ಮಾಹಿತಿ ನೀಡಿದ ಎಂಸಿಎ ವಿಭಾಗದ ನಿರ್ದೇಶಕಿ ಡಾ. ಜೋತಿಮಣಿ ಕೆ., ಈ ಉತ್ಸವ ಐಡಿಯೇಶನ್, ಐಟಿ ಕ್ವಿಜ್, ಐಟಿಮ್ಯಾನೇಜರ್, ಗೇಮಿಂಗ್, ಕೋಡಿಂಗ್, ವೆಬ್ ವಿನ್ಯಾಸ, ರೀಲ್ಸ್ ತಯಾರಿಕೆ, ಟ್ರೆಜರ್ ಹಂಟ್ ಮತ್ತು ನೃತ್ಯ ಹೀಗೆ ೯ ಆಕರ್ಷಕ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಈ ಉತ್ಸವವು ವಿದ್ಯಾರ್ಥಿಗಳ ಬಹುಮುಖೀ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದ್ದು, ಬಿಸಿಎ ಮತ್ತು ಬಿಎಸ್‌ಸಿ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.ಕಾರ್ಯಕ್ರಮ ಸಂಯೋಜಕಿ ಡಾ. ರಾಜೇಶ್ವರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿನಿ ಮೇಘನಾ ಕಾರ್ಯಕ್ರಮ ನಿರ್ವಹಿಸಿದರು.ಒಟ್ಟು ೩೦ ಮಾದರಿಗಳು ಇಲ್ಲಿ ಪ್ರದರ್ಶನಗೊಂಡವು. ಸುತ್ತ ಮುತ್ತಲಿನ ಕಾಲೇಜುಗಳ ಬಿಸಿಎ ಮತ್ತು ಬಿಎಸ್‌ಸಿ ವಿಭಾಗದ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು.