ಸಾರಾಂಶ
ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಹಾಗೂ ಕನ್ನಡ ಚಳವಳಿಯ ಪ್ರಜ್ಞಾವಂತ ದನಿ ಡಾ.ಪಿ.ವಿ.ನಾರಾಯಣ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ಇಲ್ಲಿನ ಕನ್ನಡ ಜಾಗೃತ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.
ವಿಜ್ಞಾನ ಸಾಹಿತಿ ಡಾ.ಎ.ಓ. ಆವಲಮೂರ್ತಿ ಮಾತನಾಡಿ, ಸಾಹಿತಿಗಳೆಂದರೆ 4 ಗೋಡೆಗಳ ಮಧ್ಯೆ ಇದ್ದು ಪುಸ್ತಕಗಳನ್ನು ಬರೆದು ಹೆಸರು ಗಳಿಸುವುದಷ್ಟೇ ಎನ್ನುವ ಮಾತಿಗೆ ಅಪವಾದವಾಗಿ ಡಾ.ಪಿ.ವಿ.ನಾರಾ ಯಣ ಅವರು ಕನ್ನಡದ ವಿಚಾರ ಬಂದರೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಕನ್ನಡ ನಾಡು ನುಡಿ ಉಳಿವಿಗಾಗಿ ಶ್ರಮಿಸಿದ್ದರು ಎಂದರು.ಆಳವಾದ ಸಾಹಿತ್ಯ ಅಧ್ಯಯನ:
ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಅವರು, ವಚನ ಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರು. ಬಸವಣ್ಣನವರ ವಿಚಾರ ಕುರಿತಂತೆ ಅವರು 1995ರಲ್ಲಿ ಬರೆದ ರಾಜಕಾರಣ-ಧರ್ಮ ಕುರಿತ ಧರ್ಮಕಾರಣ ಕೃತಿ ನಿಷೇಧವಾಯಿತು. ಆದರೂ, ಧೃತಿಗೆಡದೆ ತಮ್ಮ ತತ್ವ ಸಿದ್ಧಾಂತಗಳ ಮೂಲಕ ಸಾಹಿತ್ಯದ ಕೃಷಿಯಲ್ಲಿ ತೊಡಗಿದ್ದರು ಎಂದರು.ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಮೊದಲ ಬಾರಿ ಡಾ. ಪಿ.ವಿ.ನಾರಾಯಣ ಅವರನ್ನು ಕಂಡ ನೆನಪನ್ನು ಸ್ಮರಿಸಿದ ಅವರು, ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದರೂ ಅವರ ಉಪನ್ಯಾಸ ಕೇಳುವ ಅದೃಷ್ಟವಿರಲಿಲ್ಲ. ಕೆಲವು ವರ್ಷಗಳ ನಂತರ ವಿಜ್ಞಾನ ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಮಾಡಲು ಮಾರ್ಗದರ್ಶಕರಾಗುವಂತೆ ಕೇಳಿಕೊಂಡಾಗ ತಮಗೆ ವಿಜ್ಞಾನದ ಆಳ ಅಧ್ಯಯನ ಇಲ್ಲ ಎಂದು ಹೇಳಿದ್ದರು. ಆದರೆ, ಅವರು ವಿಜ್ಞಾನದಲ್ಲಿಯೂ ಆಸಕ್ತಿ ಮೂಡಿಸಿಕೊಂಡು, ನನಗೆ ಬೆನ್ನುತಟ್ಟಿ ಮಾರ್ಗದರ್ಶಕರಾಗಿ ಪಿಎಚ್‌ಡಿ ಪದವಿ ಪಡೆಯಲು ಕಾರಣರಾಗಿದ್ದರು. ಅವರ ಸಾಹಿತ್ಯ ಕೃಷಿ ನಮಗೆಲ್ಲ ಪ್ರೇರಣೆ ಎಂದರು.
ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಕನ್ನಡಪರ ಹೋರಾಟ ಗಳಲ್ಲಿ ಸಕ್ರಿಯವಾಗಿರುತ್ತಿದ್ದ ಡಾ.ಪಿ.ವಿನಾರಾಯಣ ಅವರು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದರು. 80ಕ್ಕೂ ಹೆಚ್ಚು ಕೃತಿ, ವಿಮರ್ಶೆ ಮೊದಲಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಅಸ್ತಿತ್ವ ಪ್ರತಿಪಾದಿಸಿದ್ದರು ಎಂದರು.ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ ಮಾತನಾಡಿ, ಪಿ.ವಿ.ನಾರಾಯಣ ಅವರ ನಿಧನ ಕನ್ನಡ ಸಾಹಿತ್ಯಕ್ಕೆ ಹಾಗೂ ಕನ್ನಡ ಹೋರಾಟಗಳಿಗೆ ತುಂಬಲಾರದ ನಷ್ಟ ಅವರು ಮನಸ್ಸು ಮಾಡಿ, ಪ್ರಶಸ್ತಿಗಳ ಹಿಂದೆ ಬಿದ್ದಿದ್ದರೆ ಹತ್ತಾರು ಪ್ರಶಸ್ತಿ ಬರುತ್ತಿದ್ದವು. ಆದರೆ, ಅವೆಲ್ಲವನ್ನೂ ಧಿಕ್ಕರಿಸಿ ತಮ್ಮದೇ ಆದ ಸೈದ್ದಾಂತಿಕ ನಿಲುವು ಹೊಂದಿದ್ದ ಅಪ್ರತಿಮ ವ್ಯಕ್ತಿ ಆಗಿದ್ದರು ಎಂದರು.
ಕನ್ನಡ ಜಾಗೃತ ಪರಿಷತ್ತಿನ ಪ್ರಧಾನ ಕಾಯದರ್ಶಿ ಡಿ.ಪಿ.ಆಂಜನೇಯ, ಕಸಾಪ ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿದರು.ಈ ಸಂದರ್ಭದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯ್ಕ್, ಮುಖಂಡರಾದ ಮುನಿಪಾಪಯ್ಯ, ವೆಂಕಟೇಶ್, ಕನ್ನಡ ಜಾಗೃತ ಪರಿಷತ್ತಿನ ಟ್ರಸ್ಟಿ ಮೇಜರ್ ಮಹಾಬಲೇಶ್ವರ್, ಪರಮೇಶ್, ಉಪನ್ಯಾಸಕ ಎಂ.ಸಿ.ಮಂಜುನಾಥ್, ಕನ್ನಡ ಜಾಗೃತ ಪರಿಷತ್ತಿನ ಸೊರನಾರಾಯಣ್, ಆನಂದ್ ಮತ್ತಿತರರು ಉಪಸ್ಥಿತಿ ಇದ್ದರು.
ಫೋಟೋ-5ಕೆಡಿಬಿಪಿ5- ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಸಾಹಿತಿ ಡಾ.ಪಿ.ವಿ. ನಾರಾಯಣಗೆ ನುಡಿನಮನ ಸಲ್ಲಿಸಲಾಯಿತು.