ಜಿಲ್ಲೆಯ ವಿವಿಧ ಸರ್ಕಾರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ 1,205.99 ಕೋಟಿ ರು. ಮೊತ್ತದ ಬಿಲ್‌ಗಳು ಸರ್ಕಾರದಿಂದ ಬಿಡುಗಡೆಯಾಗದೇ ಗುತ್ತಿಗೆದಾರರು, ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ, ಇದರಿಂದ ಜಿಲ್ಲೆಯ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ ತಿಳಿಸಿದೆ.
ಉಡುಪಿ: ಜಿಲ್ಲೆಯ ವಿವಿಧ ಸರ್ಕಾರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ 1,205.99 ಕೋಟಿ ರು. ಮೊತ್ತದ ಬಿಲ್‌ಗಳು ಸರ್ಕಾರದಿಂದ ಬಿಡುಗಡೆಯಾಗದೇ ಗುತ್ತಿಗೆದಾರರು, ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ, ಇದರಿಂದ ಜಿಲ್ಲೆಯ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ ತಿಳಿಸಿದೆ.ಈ ಕುರಿತು ಹೆಬ್ರಿಯಲ್ಲಿ ನಡೆದ ಸಂವಾದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು, ಬಾಕಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.ಬಾಕಿ ಬಿಲ್‌ಗಳು ಪಾವತಿಯಾದರೆ, ಗುತ್ತಿಗೆದಾರರು, ಕಾರ್ಮಿಕರು, ಸಾಮಗ್ರಿ - ಯಂತ್ರೋಪಕರಣ ಪೂರೈಕೆದಾರರು ಆರ್ಥಿಕ ಸಂಕಷ್ಟದಿಂದ ಮುಕ್ತರಾಗಿ, ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ, ಜಿಲ್ಲೆಯಲ್ಲಿ ಮತ್ತೇ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಬ್ರಹ್ಮಾವರದಲ್ಲಿ ಸುದ್ದಿಗೋಷ್ಠಿ ನಡೆಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉಪ್ಪುಂದ ಗೋಕುಲದಾಸ್ ಶೆಟ್ಟಿ ಮಾತನಾಡಿ, ಲೋಕೋಪಯೋಗಿ ಇಲಾಖೆಯಲ್ಲಿ 189.86 ಕೋಟಿ, ವಾರಾಹಿ ಯೋಜನಾ ವಿಭಾಗದಲ್ಲಿ 322.42 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ 4.92 ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ 618.85 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 21.88 ಕೋಟಿ ಹಾಗೂ ಬಂದರು - ಮೀನುಗಾರಿಕೆ ಇಲಾಖೆಯಲ್ಲಿ 43.01 ಕೋಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 1,205.99 ಕೋಟಿ ಬಿಲ್‌ಗಳು ಬಾಕಿ ಉಳಿದಿವೆ ಎಂದು ಹೇಳಿದರು.ಬ್ಯಾಂಕ್ ಸಾಲದ ಬಡ್ಡಿ, ಇಎಂಐ, ಕಾರ್ಮಿಕರ ವೇತನ ಹಾಗೂ ಸಾಮಗ್ರಿ ಖರೀದಿಗೆ ಹಣ ಪಾವತಿಸಲು ಸಣ್ಣ, ಮಧ್ಯಮ ಗುತ್ತಿಗೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೇರೆ ಜಿಲ್ಲೆಗಳ ಗುತ್ತಿಗೆದಾರರಿಗೆ ಬಿಲ್‌ಗಳ ಪಾವತಿ ನಡೆಯುತ್ತಿದ್ದರೂ ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೆ ಮಾತ್ರ ಬಿಲ್ ಪಾವತಿ ಮಾಡದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹಾಲಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬ್ಯಾಂಕ್ ಸಾಲ, ಓವರ್‌ಡ್ರಾಫ್ಟ್ ಹಾಗೂ ಖಾಸಗಿ ಸಾಲ ಪಡೆದು ಹೊಂದಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ತಾವು ಕ್ಲಪ್ತವಾಗಿ ಕಾರ್ಮಿಕರ ವೇತನ, ವಿವಿಧ ಸಾಮಗ್ರಿಗಳಿಗೆ ಹಣ ಪಾವತಿಸಿದ್ದೇವೆ. ಜತೆಗೆ ಜಿಎಸ್‌ಟಿ, ರಾಯಲ್ಟಿ ಹಾಗೂ ಕಾರ್ಮಿಕ ಸೆಸ್ ಗಳನ್ನೂ ಸಲ್ಲಿಸಿದ್ದೇವೆ. ಆದರೇ ತಮಗೆ ಬಿಲ್ ಬಿಡುಗಡೆಯಾಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ, ಆದ್ದರಿಂದ ಬಾಕಿ ಬಿಲ್‌ಗಳಿಗೆ ಅನುದಾನ ಬಿಡುಗಡೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಪಾವತಿ ಮಾಡುವಂತೆ ನಿರ್ದೇಶಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗಿದೆ ಎಂದರು.ಸಂಘದ ಗೌರವಾಧ್ಯಕ್ಷ ಬಿ.ಬಿ. ಪೂಜಾರಿ, ಉಪಾಧ್ಯಕ್ಷರಾದ ಎ.ಬಿ. ಶೆಟ್ಟಿ, ವಾದಿರಾಜ್ ಶೆಟ್ಟಿ ಹೆಬ್ರಿ, ಹೆಗ್ಗುಂಜೆ ಪ್ರಮೋದ್ ಶೆಟ್ಟಿ, ಖಜಾಂಚಿ ಚೇರ್ಕಾಡಿ ರತ್ನಾಕರ ಶೆಟ್ಟಿ, ಕಾರ್ಯದರ್ಶಿಗಳಾದ ಪವನ್ ಶಿರಿಯಾರ, ರವಿಕಿರಣ್ ಡಿಕೋಸ್ಟ, ಉಮೇಶ್ ಶೆಟ್ಟಿ ಮುನಿಯಾಲು ಇದ್ದರು.