ಹೊನ್ನಾಳಿಯಲ್ಲಿ ಪಿಡಬ್ಲ್ಯುಡಿ ಕಚೇರಿಗೆ ಬೀಗ ಜಡಿದ

| Published : Oct 30 2025, 01:02 AM IST

ಸಾರಾಂಶ

ತಾಲೂಕಿನ ತುಂಬೆಲ್ಲ ರಸ್ತೆಗಳು ಗುಂಡಿ ಬಿದ್ದಿದೆ, ಇದೇ ರಸ್ತೆಯಲ್ಲಿ ಓಡಾಡುವ ಬಸ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ ಖಾಸಗಿ ಬಸ್ ಮಾಲೀಕನೊಬ್ಬ ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿಗೆ ಬೀಗ ಹಾಕಿದ ಅಪರೂಪದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ತುಂಬೆಲ್ಲ ರಸ್ತೆಗಳು ಗುಂಡಿ ಬಿದ್ದಿದೆ, ಇದೇ ರಸ್ತೆಯಲ್ಲಿ ಓಡಾಡುವ ಬಸ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ ಖಾಸಗಿ ಬಸ್ ಮಾಲೀಕನೊಬ್ಬ ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿಗೆ ಬೀಗ ಹಾಕಿದ ಅಪರೂಪದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಕಚೇರಿ ಸಿಬ್ಬಂದಿ ಬೆಳಿಗ್ಗೆ ಕಚೇರಿ ಸ್ವಚ್ಛತೆ ಮಾಡುವ ವೇಳೆ, ಸಿಬ್ಬಂದಿ ನೀರು ತರಲು ಹೊರಗಡೆ ಬಂದಾಗ ಈತ ಕಚೇರಿಗೆ ಸಣ್ಣದೊಂದು ಬೀಗ ಹಾಕಿ ಹೋಗಿದ್ದಾನೆ ಎನ್ನಲಾಗಿದೆ.

ಈ ಹಿಂದೆ ಕಚೇರಿ ವೇಳೆಯೇ ಆಗಮಿಸಿದ್ದ ಇದೇ ವ್ಯಕ್ತಿ ಕೂಡಲೇ ರಸ್ತೆಗಳು ದುರಸ್ತಿ ಮಾಡಿಸಿ ಇಲ್ಲವೇ ಗುಂಡಿಗಳನ್ನಾದರೂ ಮುಚ್ಚಿಸಿ ಇಂತಹ ರಸ್ತೆಯಲ್ಲಿ ಬಸ್‌ಗಳು ಓಡಾಡುವುರಿಂದ ಪದೇಪದೇ ರಿಪೇರಿಗೆ ಬರುತ್ತಿವೆ ಎಂದು ಕಚೇರಿಗೆ ಬಂದು ರಸ್ತೆ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿದ್ದರು, ಆಗ ತಾನೂ ಕೂಡ ಶಾಸಕರ ಗಮನಕ್ಕೆ ತಂದಿದ್ದೇನ. ರಸ್ತೆ ಕಾಮಗಾರಿ ಕ್ರಿಯಾಯೋಜನೆ ತಯಾರಿಸಿ ಕೊಡಿ ಎಂದು ಶಾಸಕರು ತನಗೆ ತಿಳಿಸಿದ್ದಾರೆ. ಶೀಘ್ರವೇ ರಸ್ತೆ ದುರಸ್ತಿ ಮಾಡಿಸುತ್ತೇವೆ ಎಂದು ಹೇಳಿ ಕಳುಹಿಸಿದ್ದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಕಣುಮಪ್ಪ ಸ್ಪಷ್ಟಪಡಿಸಿದರು.

ತಕ್ಷಣ ಎಚ್ಚೆತ್ತ ಪೊಲೀಸರು:

ಖಾಸಗಿ ಬಸ್ ಮಾಲೀಕನೊಬ್ಬ ಬುಧವಾರ ಬೆಳಿಗ್ಗೆಯೇ ಕಚೇರಿಗೆ ಬೀಗ ಹಾಕಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸ್‌ ಇನ್‌ಸ್ಪೆಪೆಕ್ಟರ್ ಎಚ್.ಸುನಿಲ್‌ಕುಮಾರ್ ಕಚೇರಿಗೆ ಬೀಗ ಹಾಕಿದ್ದ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ಆತನಿಗೆ ಬುದ್ಧಿ ಹೇಳಿ, ‘ನಿನ್ನ ಬೇಡಿಕೆಯನ್ನು ಅಧಿಕಾರಿಗಳ ಬಳಿ ಹೇಳಿಕೋ.ಆದರೆ ಏಕಾಏಕಿ ಕಚೇರಿಗೆ ಬೀಗ ಹಾಕಿದರೆ ಅದು ಅಕ್ಷಮ್ಯ ಅಪರಾಧ’ ಎಂದು ಹೇಳಿ, ಆತನಿಂದಲ್ಲೇ ಕಚೇರಿ ಬಾಗಿಲಿಗೆ ಹಾಕಿದ್ದ ಬೀಗವನ್ನು ತಕ್ಷಣವೇ ತೆಗೆಸಿದ್ದಾರೆ.

ಕಚೇರಿಗೆ ಬೀಗ ಹಾಕಿದ್ದ ವ್ಯಕ್ತಿ, ರಸ್ತೆ ರಿಪೇರಿ ಮಾಡಿಸಬೇಕೆಂಬ ಉದ್ದೇಶ ಒಂದೇ ನನಗಿದ್ದದ್ದು ಆದರೆ ಕಚೇರಿಗೆ ಬೀಗ ಹಾಕುವುದು ತಪ್ಪು ಎಂಬ ಕಾನೂನಿನ ಅರಿವು ನನಗೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಧ್ಯ ಪ್ರವೇಶದಿಂದ ಕಚೇರಿ ಆರಂಭಕ್ಕೂ ಒಂದು ಗಂಟೆ ಮುಂಚೆಯೇ ಕಚೇರಿಗೆ ಹಾಕಿದ್ದ ಬೀಗವನ್ನು ತೆರವುಗೊಳಿಸಿದ್ದರಿಂದ ಕಚೇರಿ ದೈನಂದಿನ ಕೆಲಸಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದೇ ಕೆಲಸ ಸುಗಮವಾಗಿ ನಡೆಯಿತು ಎಂದು ಲೋಕೋಪಯೋಗಿ ಇಲಾಖೆ ಎಇಇ ಕಣುಮಪ್ಪ ತಿಳಿಸಿದರು.