ಪಿಡಬ್ಲ್ಯೂಡಿ ಕ್ವಾರ್ಟ್ರಸ್‌ ಕಳವು: ಇಬ್ಬರ ಬಂಧನ

| Published : Jul 23 2025, 01:45 AM IST

ಸಾರಾಂಶ

ಲೋಕೋಪಯೋಗಿ ವಸತಿ ಸಮುಚ್ಛಯದಲ್ಲಿ ಜು.20ರಂದು ರಾತ್ರಿ 3 ಮನೆಗಳಲ್ಲಿ ಕಳ್ಳತನ ಮಾಡಿದ್ದ ಮೂವರ ಪೈಕಿ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿನಗರದ ಲೋಕೋಪಯೋಗಿ ವಸತಿ ಸಮುಚ್ಛಯದಲ್ಲಿ ಜು.20ರಂದು ರಾತ್ರಿ 3 ಮನೆಗಳಲ್ಲಿ ಕಳ್ಳತನ ಮಾಡಿದ್ದ ಮೂವರ ಪೈಕಿ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಿವಾಸಿ ಬಂಗಡ ಯಾನೆ ಬಾಂಗು ಯಾನೆ ರಮೇಶ್‌ ಜವಾನ್‌ ಸಿಂಗ್‌ (37) ಮತ್ತು ಕಾಲಿಯಾ ಯಾನೆ ಕಾಲು (25) ಬಂಧಿತ ಅಂತಾರಾಜ್ಯ ಆರೋಪಿಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳಿಂದ 80,970 ರು. ಮೌಲ್ಯದ 681.830 ಗ್ರಾಂನ ಬೆಳ್ಳಿ ಯ ಸೊತ್ತು, 4,250 ರು. ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700 ರು, ನಗದು ಹಣ ವಶಪಡಿಸಿಕೊಳ್ಳಲಾಗಿದೆ.

ನಗರ ಠಾಣೆಯ ನಿರೀಕ್ಷಕರಾದ ಮಂಜುನಾಥ ಬಡಿಗೇರ, ಉಪನಿರೀಕ್ಷಕ ನೇತೃತ್ವದ ತಂಡ ರಾಹೆ 66ರ ಉಡುಪಿಯ ಸರ್ಕಸ್‌ ಗ್ರೌಂಡ್‌ ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರು ಮಧ್ಯಪ್ರದೇಶ ರಾಜ್ಯದವರಾಗಿದ್ದು, ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳ ಆರೋಪಿಗಳೂ ಆಗಿದ್ದಾರೆ. ಅಲ್ಲದೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದಲ್ಲಿಯೂ ಸಾಕಷ್ಟು ಕಡೆಗಳಲ್ಲಿ ಮನೆಗಳ್ಳತನದ ಪ್ರಕರಣಗಳ‍ಲ್ಲಿ ಪೊಲೀಸರಿಗೆ ಬೇಕಾಗಿದ್ದಾರೆ. ಬಾಂಗು ಮೇಲೆ ಬೇರೆ ಬೇರೆ ರಾಜ್ಯದಲ್ಲಿ 11 ಮತ್ತು ಕಾಲಿಯಾ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿರುತ್ತದೆ. ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲೇ ಕಳ್ಳತನ ಮಾಡುವುದು ಅವರ ವಿಶೇಷತೆಯಾಗಿದೆ.