ಕೊಪ್ಪಳ ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ‘ಕೃಷಿ ಉತ್ಪನ್ನಗಳ ರಫ್ತು: ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಅವಕಾಶಗಳು’ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಕೊಪ್ಪಳ: ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ದೊರೆಯಬೇಕಾದರೆ ಗುಣಮಟ್ಟ ಮತ್ತು ಬ್ರ್ಯಾಂಡಿಂಗ್‌ಗೆ ಆದ್ಯತೆ ನೀಡುವುದು ಅಗತ್ಯ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಹೇಳಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಕೃಷಿ ಉತ್ಪನ್ನಗಳ ರಫ್ತು: ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಅವಕಾಶಗಳು’ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ವಿಜ್ಞಾನಿಗಳ ಸಲಹೆಯಂತೆ ರಫ್ತಿಗೆ ಯೋಗ್ಯವಾದ ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕು. ಕೇವಲ ಕೃಷಿಯನ್ನೇ ಅವಲಂಬಿಸದೆ ಮೀನುಗಾರಿಕೆ, ರೇಷ್ಮೆ ಸೇರಿದಂತೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ರೈತರ ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆ ಕಲ್ಪಿಸುವುದು, ಬ್ರ್ಯಾಂಡಿಂಗ್ ಹಾಗೂ ಮೌಲ್ಯವರ್ಧನೆ ಕಾರ್ಯಕ್ರಮದ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಅವಕಾಶವಿದ್ದು, ರಫ್ತಿಗೆ ಅಗತ್ಯವಾದ ಶೀತಲಗೃಹ ಹಾಗೂ ಸಂಗ್ರಹಣಾ ವ್ಯವಸ್ಥೆಗಳನ್ನು ಆಧುನಿಕವಾಗಿ ಅಭಿವೃದ್ಧಿಪಡಿಸಲು ಮಾರ್ಗದರ್ಶನ ನೀಡುವಂತೆ ಅಪೇಡ ಪ್ರತಿನಿಧಿಗಳಿಗೆ ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಕೊಪ್ಪಳದ ಕೇಸರ ಮಾವು ಉತ್ತಮ ಬ್ರ್ಯಾಂಡ್ ಮೌಲ್ಯ ಹೊಂದಿದ್ದು, ವಿದೇಶಗಳಿಗೂ ರಫ್ತಾಗಿದೆ. ಆದರೆ ಅತಿಯಾದ ರಾಸಾಯನಿಕ ಬಳಕೆಯಿಂದ ರಫ್ತು ಮಾಡಿದ ಮಾವು ವಾಪಸ್ ಬಂದಿರುವುದು ಆತಂಕಕಾರಿ. ಜಾಗತಿಕ ಮಾರುಕಟ್ಟೆಯ ಮಾನದಂಡಗಳಿಗೆ ಅನುಗುಣವಾಗಿ ರಾಸಾಯನಿಕ ಅವಶೇಷ ಮುಕ್ತ ಗುಣಮಟ್ಟದ ಉತ್ಪನ್ನಗಳನ್ನು ಬೆಳೆಯಬೇಕು ಎಂದರು.

ಅಪೇಡದ ಅಭಿವೃದ್ಧಿ ವ್ಯವಸ್ಥಾಪಕ ಕಾರಂತ್ ಬಿ. ಮಾತನಾಡಿ, ಅಪೇಡದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಅವಕಾಶವಿದೆ. ಮೂಲಸೌಕರ್ಯ, ಸಂಗ್ರಹಣಾ ಘಟಕ, ಗ್ರೇಡಿಂಗ್, ಬ್ರ್ಯಾಂಡಿಂಗ್ ಹಾಗೂ ಪ್ಯಾಕಿಂಗ್‌ಗೆ ನೋಂದಾಯಿತ ಸದಸ್ಯರಿಗೆ ಶೇ. 75ರಷ್ಟು ಸಹಾಯಧನ ಮತ್ತು ಮೂರು ದಿನಗಳ ಉಚಿತ ತರಬೇತಿ ಸೌಲಭ್ಯವಿದೆ ಎಂದು ತಿಳಿಸಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಪಿ.ಆರ್. ಬದರಿ ಪ್ರಸಾದ್, ಸಾವಯವ ಕೃಷಿಕ ಆನಂದತೀರ್ಥ ಪ್ಯಾಟಿ ಮಾತನಾಡಿದರು. ನೂರಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಸಂವಾದದಲ್ಲಿ ಪಾಲ್ಗೊಂಡರು. ತೋಟಗಾರಿಕೆ ಸಂಪನ್ಮೂಲ ವ್ಯಕ್ತಿ ವಾಮನಮೂರ್ತಿ ಕಾರ್ಯಕ್ರಮ ನಿರೂಪಿಸಿದರು.