ಕನ್ನಡಪ್ರಭ ವಾರ್ತೆ ಶಿರಾ

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಯುತ ಶಿಕ್ಷಣ ಪ್ರತಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದು, ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಶಾಲೆ, ಗ್ರಾಮ, ತಂದೆ ತಾಯಿಗಳಿಗೆ ಕೀರ್ತಿ ತರುವಂತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎಚ್. ಮಂಜುನಾಥ್ ಹೇಳಿದರು.

ಅವರು ತಾಲೂಕಿನ ಗೌಡಗೆರೆ ಹೋಬಳಿಯ ನಾರಾಯಣಪುರ ಗೇಟ್ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಲ್ಲಿ ಹೆಚ್ಚು ಪ್ರತಿಭಾವಂತವರಿದ್ದು ಅವರ ಶಿಕ್ಷಣಕ್ಕೆ ಪ್ರತಿ ವರ್ಷ ಸೇವೆ ಮಾಡುವ ಮೂಲಕ ಮಕ್ಕಳಲ್ಲಿ ದೇವರನ್ನು ಕಾಣುತ್ತಿದ್ದೇನೆ. ಉಳ್ಳವರು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತಹ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕ ಅರುಣ ಕುಮಾರ್‌ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿ ಕಲಿಯಬೇಕೆಂಬ ಆಸಕ್ತಿ ಉತ್ಸಾಹ ಹೊಂದಿದಾಗ ಶೈಕ್ಷಣಿಕ ಯಶಸ್ಸು ಸಾಧಿಸಲು ಸಾಧ್ಯ. ಸಾಧಿಸಬೇಕೆಂಬ ಛಲ, ವಿಶ್ವಾಸ ಯಶಸ್ಸಿನ ದಡ ಸೇರಿಸಲಿದೆ. ಗುರು ಹಿರಿಯರನ್ನು ಗೌರವಿಸುವಂತಹ ಸಂಸ್ಕಾರ ಕೂಡ ಅಗತ್ಯ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪ್ರಮೀಳಮ್ಮ, ಭೂ ದಾನಿಗಳಾದ ಕಸ್ತೂರಮ್ಮ ಈರಣ್ಣ, ಮುಖ್ಯ ಶಿಕ್ಷಕ ಅರುಣ ಕುಮಾರ, ಹುಣಸೆಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ವೆಂಕಟೇಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಲಿಂಗೇಶ್, ಮುಖ್ಯ ಶಿಕ್ಷಕ ಸುರೇಶ್ ಬಾಬು, ಶಿಕ್ಷಕರಾದ ಟಿಪ್ಪು ಸುಲ್ತಾನ್, ದೇವರಾಜು, ರುದ್ರಪ್ಪ, ಷಫೀ ಉಲ್ಲಾ, ಎಲ್. ಚಂದ್ರಶೇಖರ್ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.