ಪಿಯು ಹಂತದಲ್ಲಿ ಗುಣಮಟ್ಟದ ಶಿಕ್ಷಣ: ಸತೀಶ ನಾಯ್ಕ

| Published : Sep 20 2025, 01:02 AM IST

ಸಾರಾಂಶ

ವಿದ್ಯಾರ್ಥಿಗಳ ಜ್ಞಾನದ ಹಾಗೂ ಚಿಂತನೆಯ ಗುಣಮಟ್ಟ ವೃದ್ಧಿ.

ಹಳಿಯಾಳ: ಜಿಲ್ಲೆಯಲ್ಲಿ ಪದವಿ ಪೂರ್ವ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪ್ರತಿ ವರ್ಷ ವಿಷಯವಾರು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಉತ್ತಮ ಫಲಿತಾಂಶ ಬರುವ ದಿಸೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆದಿದೆ ಎಂದು ಉತ್ತರ ಕನ್ನಡ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಸತೀಶ ಬಿ. ನಾಯ್ಕ ಹೇಳಿದರು.

ಪಟ್ಟಣದ ಕೆ.ಎಲ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಜೀವಶಾಸ್ತ್ರ ವಿಷಯಾಧಾರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಜ್ಞಾನದ ಹಾಗೂ ಚಿಂತನೆಯ ಗುಣಮಟ್ಟ ವೃದ್ಧಿ. ಅವರ ಸಂದೇಹ ಕುತೂಹಲಗಳಿಗೆ ಉತ್ತರಿಸುವಲ್ಲಿ ಉಪನ್ಯಾಸಕರು ಸಕ್ಷಮರಾಗಬೇಕು. ಪ್ರತಿದಿನ ತರಗತಿಗೆ ಹೋಗುವ ಮುನ್ನ ವಿಷಯಕ್ಕೆ, ಬೋಧನೆಗೆ ಸಂಬಂಧಿಸಿದ ಅಧ್ಯಯನ, ಪೂರಕ ಮಾಹಿತಿ, ಪ್ರಚಲಿತ ಜಾಗತಿಕ ಸಂಶೋಧನೆಗಳು, ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಸಿದ್ಧರಾಗಿ ಹೋಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಪತ್ರೇಕರ ಮಾತನಾಡಿ, ಉತ್ತರ ಕನ್ನಡ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆಯು ಕಳೆದ 14 ವರ್ಷಗಳಿಂದ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತಿದೆ ಎಂದರು.

ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಮಖಂಡಿ ಕೊಣ್ಣೂರ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಸವರಾಜ ಕೊಣ್ಣೂರ ಕಾರ್ಯಾಗಾರದಲ್ಲಿ ತರಬೇತಿ ನೀಡಿದರು.

ಕೆ.ಎಲ್.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ಪ್ರಭು, ಜೀವಶಾಸ್ತ್ರ ಉಪನ್ಯಾಸಕರ ಸಂಘದ ತಾಲೂಕ ಅಧ್ಯಕ್ಷ ಸತೀಶ ಮಾನೆ, ಹಳಿಯಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎನ್.ಬಾಂದುರ್ಗಿ, ವಿ.ಡಿ. ಹೆಗಡೆ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಬಾಬರ, ಉಪನ್ಯಾಸಕಿ ಪ್ರೀತಿ ತೇಲಿ ಇದ್ದರು. ನಿಫಾ ಮಸ್ಕರೇನ್ಸ್ ಕಾರ್ಯಕ್ರಮ ನಿರ್ವಹಿಸಿದರು.

100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ನಡೆದ ಸಮಾರಂಭದಲ್ಲಿ ಕೆ.ಎಲ್.ಎಸ್ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ಮಾರ್ಟ್‌ ಸಿಇಟಿ ಕ್ಲಾಸ್‌ನ್ನು ಉಪನಿರ್ದೇಶಕ ಸತೀಶ ಬಿ. ನಾಯ್ಕ ಉದ್ಘಾಟಿಸಿದರು.

ಜಿಲ್ಲಾ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ಅತಿಥೇಯ ಕೆ.ಎಲ್.ಎಸ್ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದವರು ಕಾರ್ಯಾಗಾರ ಆಯೋಜಿಸಿದರು.