ಸಾರಾಂಶ
ಗದಗ: ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಡಾ. ಪ್ರಕಾಶ ಗುಂಡೂರ ಹೇಳಿದರು. ಅವರು ಸೋಮವಾರ ಗದಗ ತಾಲೂಕಿನ ಮುಳಗುಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ (ಆರ್.ಎಂ.ಎಸ್.ಎ) ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಕಲಿಕೆಯ ದಿನಗಳಲ್ಲಿ ಕಲಿಯುವುದನ್ನು ಮಾತ್ರ ಮಾಡಬೇಕು. ಶ್ರದ್ಧೆ ಮತ್ತು ನಿಷ್ಠೆಯಿಂದ ಅಭ್ಯಾಸ ಮಾಡಿದಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಿದೆ. ಇಂದು ಇಲ್ಲಿ ಪ್ರತಿಭಾ ಪುರಸ್ಕಾರ ಪಡೆದವರು ಬರಲಿರುವ ದಿನಗಳಲ್ಲಿ ತಾವೂ ಈ ರೀತಿಯ ಪ್ರತಿಭಾ ಪುರಸ್ಕಾರ ನೀಡುವಂತಾಗಲಿ ಎಂದರು. ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅವರು ಪ್ರತಿಷ್ಠಾನ ಧ್ಯೇಯೋದ್ದೇಶಗಳನ್ನು ವಿವರಿಸಿ ವಿದ್ಯಾರ್ಥಿಗಳು ಪ್ರತಿಷ್ಠಾನದ ಲಾಭವನ್ನು ಪಡೆದುಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಎಸ್.ಎಚ್. ಪೂಜಾರ ವಹಿಸಿದ್ದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಶಿವಾನಂದ ಕತ್ತಿ, ಸುಭಾಸ ಬೆಟದೂರ, ಎಸ್.ಜಿ.ಫಿರಂಗಿ, ನೇಹಾ, ಸುಧಾರಾಣಿ, ವೀರೇಶ ಗಂಜಿ ಉಪಸ್ಥಿತರಿದ್ದರು. ರೇಣುಕಾ ಕಮ್ಮಾರ, ಹರೀಶ ಕೆಂಚನಾಯ್ಕರ್, ಇಕ್ಬಾಲ್ ಯಳವತ್ತಿ, ದೀಪಾ ಇಡಗುರಿ, ರಜೀಯಾ ಮುಂದಿನಮನಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ವ್ಹಿ. ತಿಮ್ಮಾಪೂರ ಸ್ವಾಗತಿಸಿ ಪರಿಚಯಿಸಿದರು. ಜಿ.ಐ. ಪಾಟೀಲ ನಿರೂಪಿಸಿದರು. ವ್ಹಿ.ಟಿ. ಅಂಗಡಿ ವಂದಿಸಿದರು.