ಅತ್ಯಂತ ಕ್ಲಿಷ್ಟಕರ ಭೌಗೋಳಿಕ ಪ್ರದೇಶವಾಗಿರುವ ಬೆಳ್ತಂಗಡಿ ತಾಲೂಕಿನ ಶಿಕ್ಷಕರು ವಿವಿಧ ಸವಾಲುಗಳ ನಡುವೆಯೂ ಸಮಸ್ಯೆಗಳ ಬಗ್ಗೆ ಚಿಂತಿಸದೆ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಅತ್ಯಂತ ಕ್ಲಿಷ್ಟಕರ ಭೌಗೋಳಿಕ ಪ್ರದೇಶವಾಗಿರುವ ಬೆಳ್ತಂಗಡಿ ತಾಲೂಕಿನ ಶಿಕ್ಷಕರು ವಿವಿಧ ಸವಾಲುಗಳ ನಡುವೆಯೂ ಸಮಸ್ಯೆಗಳ ಬಗ್ಗೆ ಚಿಂತಿಸದೆ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಶನಿವಾರ ಬೆಳ್ತಂಗಡಿಯ ಎಸ್ ಡಿಎಂ ಕಲಾಭವನದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು ಪ್ರತಿಯೊಬ್ಬರ ಬದುಕಿನಲ್ಲೂ ಆಶಾದಾಯಕ ಶಕ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಹಾಗೂ ಅಗತ್ಯಗಳ ಕುರಿತು ತಾಲೂಕಿನ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಯೋಜನೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ದೇಶವೇ ಗುರುತಿಸುವಂತಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಶಿಕ್ಷಕರು ನೀಡುತ್ತಿರುವ ಸಹಕಾರ ಅವಿಸ್ಮರಣೀಯ. ಹೆಚ್ಚಿನ ಶಿಕ್ಷಕರು ಸಾಹಿತಿಗಳಾಗಿರುವುದು ಸಂತಸದ ವಿಚಾರ ಎಂದರು.ತಹಸೀಲ್ದಾರ್ ಎಸ್.ಎನ್. ನರಗುಂದ ಶುಭ ಹಾರೈಸಿದರು. ಬಿಇಒ ಡಾ. ರಾಜಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಒ ಭವಾನಿಶಂಕರ್ ಸ್ವಾಗತಿಸಿದರು. ಕೊರಂಜ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಶಿಕ್ಷಕಿ ಮಮತಾ ಕೆ. ಹಾಗೂ ಪಿಲ್ಲಂಗೋಳಿ ಸರ್ಕಾರಿ ಶಾಲೆಯ ಶಿಕ್ಷಕ ಪೃಥ್ವಿರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ಸಾಧಕ ಶಿಕ್ಷಕರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.