ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯಯುತ ಸಂಸ್ಕಾರ

| Published : Oct 11 2025, 12:02 AM IST

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯಯುತ ಸಂಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಕ್ಕಳಿಗೆ ಬೇಕಾದ ಗುಣಮಟ್ಟದ ಶಿಕ್ಷಣ ಜತೆಗೆ ಮೌಲ್ಯಯುತ ಸಂಸ್ಕಾರ ಸಿಗುತ್ತದೆ. ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಹಾವೇರಿ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಕ್ಕಳಿಗೆ ಬೇಕಾದ ಗುಣಮಟ್ಟದ ಶಿಕ್ಷಣ ಜತೆಗೆ ಮೌಲ್ಯಯುತ ಸಂಸ್ಕಾರ ಸಿಗುತ್ತದೆ. ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ಇಲ್ಲಿಯ ರಾಜೇಂದ್ರ ನಗರದಲ್ಲಿ ಶುಕ್ರವಾರ ನೂತನವಾಗಿ ಪ್ರಾರಂಭಿಸಲಾದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಹಾಗೂ 2026-27ನೇ ಸಾಲಿನ ಶಾಲಾ ನೋಂದಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತ ದೇಶದ ಸಾಂಸ್ಕೃತಿಕ ಪರಂಪರೆ ಜಗತ್ತಿನಲ್ಲಿ ವಿಶೇಷತೆ ಪಡೆದುಕೊಂಡಿದೆ. ದೇಶಕ್ಕೆ ಗೌರವ, ಮಾನ್ಯತೆ, ದೇಶಭಕ್ತಿ ಕೊಡುವುದನ್ನು ನಿತ್ಯವೂ ನೋಡುತ್ತಿದ್ದೇವೆ. ಶಿಕ್ಷಣದ ಜತೆಗೆ ಸಂಸ್ಕಾರ ನೀಡಿದರೆ ಭವ್ಯ ಭಾರತದ ಪ್ರಜೆಗಳ ಜೀವನ ಉಜ್ವಲವಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಿಕ್ಷಣ ಕ್ಷೇತ್ರಕ್ಕೆ ಹೊಸ ದಾಫುಗಾಲು ಇಟ್ಟಿದೆ. ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಮಕ್ಕಳ ಮನಸ್ಸಿನ ಭಾವನೆ ಚಂಚಲಗೊಳಿಸುತ್ತಿದೆ. ಆಧುನಿಕತೆಗೆ ಹೊಂದಿಕೊಂಡಂತೆ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚುತ್ತಿವೆ. ಅಂಕಗಳನ್ನು ಬೆನ್ನತ್ತಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳು ಸರ್ಕಾರಿ ನೌಕರ ಆಗಬೇಕೆಂಬ ಭಾವ ಇರುತ್ತದೆ. ಮಗುವಿನ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಪಡೆದು ಸುಸಂಸ್ಕೃತ ವ್ಯಕ್ತಿಗಳಾಗಬೇಕು ಎಂದರು.ರಾಷ್ಟ್ರ ಭಕ್ತಿಯನ್ನು ತುಂಬುವುದರ ಜತೆಗೆ ಬದುಕನ್ನು ಎಲ್ಲ ರಂಗದಲ್ಲೂ ಯಶಸ್ವಿ ಮಾಡಿಕೊಳ್ಳಬೇಕು. ಹೆಣ್ಣು ಗಂಡು ಎಂಬ ಭೇದಭಾವ ಮಾಡದೆ ಶಿಕ್ಷಣ ನೀಡಬೇಕು. ಮಗು ಶಿಕ್ಷಣ ಪಡೆದು ಸೇವೆದಾತ, ಅನ್ನದಾತ, ವಿದ್ಯಾದಾತ ಹೀಗೆ ಸಮರ್ಥ ಪ್ರಜೆಯಾಗಬೇಕು. ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು. ಸಂಸ್ಕಾರವಿಲ್ಲದ ಶಿಕ್ಷಣಕ್ಕೆ ಯಾವತ್ತಿಗೂ ಬೆಲೆ ಇರಲ್ಲ. ಅಂತಹ ಸಂಸ್ಕಾರ ನೀಡುವ ರಾಷ್ಟ್ರೋತ್ಥಾನ ಉತ್ತರೋತ್ತರವಾಗಿ ಬೆಳೆಯಲಿ. ಹಾವೇರಿ ರಾಷ್ಟ್ರೋತ್ಥಾನ ಕೇಂದ್ರ ಕರ್ನಾಟಕಕ್ಕೆ ಮಾದರಿ ಶಿಕ್ಷಣ ಸಂಸ್ಥೆಯಾಗಲಿ ಎಂದರು.ಉದ್ಯಮಿ ಪವನ್ ಬಹದ್ದೂರ್ ದೇಸಾಯಿ ಮಾತನಾಡಿ, ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳು ಅಂಕಗಳಿಸುವ ಕಾರ್ಖಾನೆಯಾಗಿ ಮಾರ್ಪಟ್ಟಿವೆ.ಆಧುನಿಕ ಶಿಕ್ಷಣ ವ್ಯವಸ್ಥೆ ಪ್ರಭಾವದಿಂದ ಭಾರತೀಯ ಶಿಕ್ಷಣ ವ್ಯವಸ್ಥೆ ದೂರವಾಗುತ್ತಿದೆ. ಸಮಗ್ರ ಹಾಗೂ ಸರ್ವತೋಮುಖ ಶಿಕ್ಷಣ ಪಡೆಯಲು ಆಚಾರ, ವಿಚಾರ, ಭಾರತೀಯ ಜ್ಞಾನ ಪರಂಪರೆ ನೀಡುವಲ್ಲಿ ರಾಷ್ಟ್ರೋತ್ಥಾನ ಪರಿಷತ್ ಯಶಸ್ವಿಯಾಗಿ ಕಾರ್ಯಚಟುವಟಿಕೆ ನಡೆಸುತ್ತಿದೆ. ರಾಜ್ಯದ 19 ರಾಷ್ಟ್ರೋತ್ಥಾನ ಶಾಲೆಗಳಂತೆ ಹಾವೇರಿಯಲ್ಲಿ ಆರಂಭವಾಗುತ್ತಿರುವ 20ನೇ ಶಾಲೆಯು ಯಶಸ್ವಿಯಾಗಿ ಮುನ್ನಡೆಯಬೇಕೆಂದು ತಿಳಿಸಿದರು. ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿ ಸದಸ್ಯ ಜಯಣ್ಣ ಎಚ್.ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 60 ವರ್ಷಗಳಿಂದ ರಾಷ್ಟ್ರೋತ್ಥಾನ ಸಂಸ್ಥೆ ವಿವಿಧ ಮಜಲುಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಾಹಿತ್ಯ ಕ್ಷೇತ್ರದಿಂದ ಕಾರ್ಯಚಟುವಟಿಕೆ ಆರಂಭಿಸಿದ ಪರಿಷತ್ ರಾಜಕೀಯ ಹೊರತುಪಡಿಸಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರದಲ್ಲಿ ಬದುಕು ಕಟ್ಟಿಕೊಳ್ಳುವ ಸಾಹಿತ್ಯ ಕುರಿತು 300 ಪುಸ್ತಕಗಳು ಪ್ರಕಟವಾಗಿವೆ. ಶಿಕ್ಷಣ, ಆರೋಗ್ಯ, ಜನಜಾಗೃತಿ ಹೀಗೆ ಕೆಲಸ ಮಾಡಿಕೊಂಡು ಬರುತ್ತಿದೆ. ರಾಷ್ಟ್ರೋ ತ್ಥಾನ ಪರಿಷತ್ ಆದಾಯಕ್ಕೋಸ್ಕರ ಕೆಲಸ ಮಾಡದೆ ಸೇವೆಗೋಸ್ಕರ ನಿರಂತರ ಕೆಲಸ ಮಾಡಿಕೊಂಡು ಬರುತ್ತಿದೆ. ಬರುವ ಮೇ ಅಂತ್ಯದೊಳಗೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ಕೇಂದ್ರ ಆರಂಭವಾಗಲಿದೆ ಎಂದು ವಿವರಿಸಿದರು. ಈ ವೇಳೆ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಶ್ರೀಕಾಂತ ಹುಲಿಮನಿ, ಹಾನಗಲ್ ಆರ್‌ವಿಕೆ ಶಾಲೆಯ ಪ್ರಾಂಶುಪಾಲರಾದ ಶ್ರೀದೇವಿ ಜಿ. ಸೇರಿದಂತೆ ರಾಷ್ಟ್ರೋತ್ಥಾನ ಕೇಂದ್ರದ ಸಿಬ್ಬಂದಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಅಮೃತ್ ಎಚ್.ಎಂ., ನಿರೂಪಿಸಿದರು. ಶಾಂಭವಿ ಮಾತಾಜಿ ಪ್ರಾರ್ಥಿಸಿದರು. ಶಶಿಧರ್ ಬಿರಾದರ ಸ್ವಾಗತಿಸಿದರು.