ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಗುಣಮಟ್ಟದ ರೇಷ್ಮೆಗೂಡನ್ನು ಉತ್ಪಾದಿಸಲು ಗುಣಮಟ್ಟದ ಹಿಪ್ಪುನೇರಳೆ ಸೊಪ್ಪನ್ನು ನೀಡಬೇಕಾಗುತ್ತದೆ. ಅದಕ್ಕಾಗಿ ಹಿಪ್ಪುನೇರಳೆ ತೋಟ ಹಾಗೂ ರೇಷ್ಮೆ ಹುಳು ಸಾಕಣೆ ಮನೆಯ ಉತ್ತಮ ನಿರ್ವಹಣೆಯೂ ಪ್ರಮುಖ ಪಾತ್ರವಹಿಸುತ್ತದೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಭೋಜಣ್ಣ ತಿಳಿಸಿದರು.ಕೌಶಲ್ಯ ಅಭಿವೃದ್ಧಿ ಕೇಂದ್ರ, ಕೃಷಿ ವಿಶ್ವ ವಿದ್ಯಾಲಯ, ಕೃಷಿ ಮಹಾ ವಿದ್ಯಾಲಯ ರೇಷ್ಮೆ ಕೃಷಿ ವಿಭಾಗ ಹಾಗೂ ಶಿಡ್ಲಘಟ್ಟದ ರೇಷ್ಮೆ ಇಲಾಖೆಯ ಆಶ್ರಯದಲ್ಲಿ ನಗರದ ಸರ್ಕಾರಿ ರೇಷ್ಮೆಬಿತ್ತನೆ ಕೋಠಿ ಸಭಾಂಗಣದಲ್ಲಿ ನಡೆದ ರೈತ ಹಾಗೂ ರೈತ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಂತೆ ರೇಷ್ಮೆ ಕೃಷಿ ಕ್ಷೇತ್ರದಲ್ಲೂ ಅಗಾಧವಾದ ತಾಂತ್ರಿಕತೆ ಬಂದಿದೆ. ರೈತರು ನೂತನ ತಾಂತ್ರಿಕತೆಯನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆಗೂಡನ್ನು ಉತ್ಪಾದಿಸಿ ಹೆಚ್ಚಿನ ಇಳುವರಿ ಪಡೆದರೆ ಮಾತ್ರವೇ ರೇಷ್ಮೆ ಕೃಷಿ ಲಾಭದಾಯಕವಾಗಲಿದೆ ಎಂದರು.ರಸಗೊಬ್ಬರಗಳನ್ನು ಕಡಿಮೆ ಮಾಡಿ ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಕೊಟ್ಟಾಗಲೇ ಉತ್ತಮ ಗುಣಮಟ್ಟದ ರಸಭರಿತ ಹಿಪ್ಪುನೇರಳೆ ಸೊಪ್ಪನ್ನು ಉತ್ಪಾದಿಸಲು ಸಾಧ್ಯ. ಈ ನಿಟ್ಟಿನಲ್ಲಿ ರೈತರು ಹೆಚ್ಚು ಗಮನ ಹರಿಸಬೇಕು ಎಂದು ಕೋರಿದರು.
ಈ ನಿಟ್ಟಿನಲ್ಲಿ ಸರ್ಕಾರವು ಇಲಾಖೆಯ ಮೂಲಕ ಕಾಲ ಕಾಲಕ್ಕೆ ರೈತರಿಗೆ ತರಬೇತಿ ನೀಡಲಿದ್ದು, ತಜ್ಞರಿಂದ ಸೂಕ್ತ ತರಬೇತಿ, ಮಾಹಿತಿಯನ್ನು ನೀಡಲಾಗುವುದು. ತರಬೇತಿಯ ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಮಾತನಾಡಿ, ರೈತರು ಮಾರುಕಟ್ಟೆಗೆ ೫- ೬ ದಿನಗಳ ರೇಷ್ಮೆಗೂಡನ್ನು ತನ್ನಿ. ಇದರಿಂದ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗಲಿದೆ. ಆದರೆ ಬಹುತೇಕ ರೈತರು ೪-೫ ದಿನಗಳ ಗೂಡನ್ನು ತರುವುದು ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದರು.
ಚಳಿಗಾಲದಲ್ಲಿ ಸುಣ್ಣ ಕಟ್ಟು ರೋಗ ಸೇರಿದಂತೆ ಹಲವು ರೋಗಗಳು ರೇಷ್ಮೆ ಹುಳುಗಳನ್ನು ಕಾಡುವುದುಂಟು. ಥಂಡಿ ವಾತಾವರಣ, ಮಂಜಿನ ಹನಿಯ ತೇವಾಂಶ ಇರುವ ಹಿಪ್ಪುನೇರಳೆ ಸೊಪ್ಪನ್ನು ನೀಡುವುದು ಕೂಡ ಸುಣ್ಣ ಕಟ್ಟು ರೋಗ ಹೆಚ್ಚಲು ಕಾರಣವಾಗುತ್ತದೆ ಎಂದು ತಿಳಿಸಿದರು.ಚಳಿಗಾಲದಲ್ಲಿ ರೇಷ್ಮೆ ಹುಳುಗಳನ್ನು ಕಾಡುವ ಸುಣ್ಣಕಟ್ಟು ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಉತ್ತಮ ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆಗಾಗಿ ಹೇಗೆ ಹಣ್ಣಾದ ರೇಷ್ಮೆ ಹುಳುಗಳನ್ನು ನಿರ್ವಹಣೆ ಮಾಡಬೇಕು, ರೇಷ್ಮೆ ಗೂಡನ್ನು ಶಬ್ಭಿ(ಹದ) ಮಾಡುವ ವಿಧಾನ, ರೇಷ್ಮೆಗೂಡಿನ ಗ್ರೇಡಿಂಗ್ ಮಾಡುವುದು ಮತ್ತು ಎಷ್ಟು ದಿನದ ಗೂಡನ್ನು ರೇಷ್ಮೆಗೂಡು ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಸಿಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ನಂತರ ಹಿಪ್ಪುನೇರಳೆ ಬೆಳೆಯಲ್ಲಿ ಲಘು ಪೋಷಕಾಂಶ, ಹಸಿರೆಲೆ ಗೊಬ್ಬರ ಮತ್ತು ಜೈವಿಕ ಗೊಬ್ಬರ ಬಳಕೆ ಕುರಿತು ಚಿಂತಾಮಣಿಯ ರೇಷ್ಮೆಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಡಾ.ಎನ್.ಅಮರನಾಥ್, ಹಿಪ್ಪುನೇರಳೆ ಬೆಳೆಯಲ್ಲಿ ಸಾವಯವ ಮತ್ತು ರಸಗೊಬ್ಬರಗಳ ಬಳಕೆ ಬಗ್ಗೆ ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಮಾಹಿತಿ ನೀಡಿದರು. ಹಿಪ್ಪುನೇರಳೆ ಬೆಳೆಗೆ ತಗಲುವ ಪ್ರಮುಖ ರೋಗಗಳ ನಿರ್ವಹಣೆ ಕುರಿತು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ಹಿಪ್ಪುನೇರಳೆ ಬೆಳೆಯಲ್ಲಿ ಪ್ರಮುಖ ಪೀಡೆಗಳ ನಿರ್ವಹಣೆ ಕುರಿತು ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ಕೃಷಿ ತಜ್ಞೆ ಡಾ.ಜಿ.ಆರ್.ಅರುಣಾ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ರೇಷ್ಮೆ ಬೆಳೆಗಾರರಿಗೆ ಜೈವಿಕ ಗೊಬ್ಬರ ಮತ್ತು ಸಿರಿ ಬೂಸ್ಟ್ ಪ್ಯಾಕೇಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು.ರೇಷ್ಮೆ ಇಲಾಖೆ ಉಪ ನಿರ್ದೇಶಕ ಭೋಜಣ್ಣ, ಬೆಂಗಳೂರು ಕೃಷಿ ಮಹಾ ವಿದ್ಯಾಲಯದ ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥ್ ಗೌಡ, ಡಾ.ಎನ್.ಅಮರನಾಥ್, ಕೆ.ತಿಮ್ಮರಾಜು, ಅಕ್ಮಲ್ ಪಾಷ, ಡಾ.ಜಿ.ಆರ್.ಅರುಣ, ಮಧುಸೂಧನ್, ರೈತರು ಹಾಜರಿದ್ದರು.