ಗುಣಮಟ್ಟದ ರಸ್ತೆ ನಿರ್ಮಾಣ ಗೋವಿಂದಪ್ಪ

| Published : Mar 11 2024, 01:22 AM IST

ಸಾರಾಂಶ

ರಸ್ತೆ ಸಂಪರ್ಕ ಪಡೆಯದೇ ಇರುವ ಗ್ರಾಮಗಳನ್ನು ಗುರುತಿಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಹೊಸದುರ್ಗ: ರಸ್ತೆ ಸಂಪರ್ಕ ಪಡೆಯದೇ ಇರುವ ಗ್ರಾಮಗಳನ್ನು ಗುರುತಿಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ತಾಲೂಕಿನ ನಾನಾ ಗ್ರಾಮಗಳಲ್ಲಿ ಭಾನುವಾರ 2024-25ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಯೋಜನೆ 25 ಕೋಟಿ ರು.ಗಳ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸ್ವಾತಂತ್ರ್ಯ ನಂತರವೂ ದೊಡ್ಡತಿಮ್ಮಯ್ಯನಹಟ್ಟಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಕಳೆದ 30 ವರ್ಷಗಳಿಂದ ಸಂಪರ್ಕ ರಸ್ತೆ ನಿರ್ಮಿಸಲು ಸಾಕಷ್ಟು ಭಾರಿ ಪ್ರಯತ್ನಿಸಿದರೂ ಅವಕಾಶ ಸಿಕ್ಕಿರಲಿಲ್ಲ. ರಸ್ತೆ ಅಕ್ಕಪಕ್ಕದ ಜಮೀನಿನವರು ಅಡಚಣೆ ಮಾಡುತ್ತಿದ್ದರು. ಈಗ ಗ್ರಾಮದ ಹಿರಿಯರು ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ. 30 ವರ್ಷಗಳ ಸತತ ಪ್ರಯತ್ನದ ಫಲವಾಗಿ ಈ ಗ್ರಾಮಕ್ಕೆ ರಸ್ತೆ ನಿರ್ಮಾಣ ಆಗುತ್ತಿದೆ. 40 ಲಕ್ಷ ರು.ಗಳ ವೆಚ್ಚದಲ್ಲಿ ಮಾಳಿಗೆಹಟ್ಟಿಯಿಂದ ದೊಡ್ಡತಿಮ್ಮಯ್ಯನಹಟ್ಟಿ ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ಹುಣವಿನಡು ಗ್ರಾಪಂ ವ್ಯಾಪ್ತಿಯ ಹುಣಸೆಕಟ್ಟೆ ಗ್ರಾಮದಲ್ಲಿ ಶಾಲಾ ಕೊಠಡಿ ಇಲ್ಲದ ಕಾರಣ ಮಕ್ಕಳು ಆವರಣದಲ್ಲಿ ಕುಳಿತು ಪಾಠ ಕಲಿಸುವ ಪರಿಸ್ಥಿತಿಯಿತ್ತು. ಈ ಹಿನ್ನೆಲೆಯಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದರು. ಗ್ರಾಪಂ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಜರಿದ್ದರು.