ಒಂದು ಸಾವಿರ ರು. ಟಿಕೆಟ್ ದರ್ಶನದ ಸರತಿ ಸಾಲಿನಲ್ಲಿ ಜನದಟ್ಟಣೆ ಕಡಿಮೆ ಇದ್ದರೆ, ೩೦೦ ರು. ಟಿಕೆಟ್ ದರ್ಶನದ ಸಾಲಿನಲ್ಲಿ ಹೆಚ್ಚಿನ ಭಕ್ತರು ಕಂಡುಬಂದರು. ದರ್ಶನ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಅವರು ಖುದ್ದಾಗಿ ವಿವಿಧ ಸರತಿ ಸಾಲುಗಳನ್ನು ಪರಿಶೀಲಿಸಿದರು. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಅಲ್ಲದೆ, ಸಿಸಿ ಕ್ಯಾಮೆರಾಗಳ ಮೂಲಕವೂ ಭಕ್ತರ ಸರತಿ ಸಾಲುಗಳ ಚಲನವಲನವನ್ನು ನಿರಂತರವಾಗಿ ವೀಕ್ಷಿಸಿ ವ್ಯವಸ್ಥೆಯ ಮೇಲೆ ನಿಗಾ ವಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹಾಸನಾಂಬೆ ದರ್ಶನದ ಅವಧಿಯನ್ನು ವಿಸ್ತರಿಸಿರುವುದರಿಂದ ಭಕ್ತರು ಯಾವುದೇ ಆತುರ, ಗೊಂದಲವಿಲ್ಲದೆ ನೆಮ್ಮದಿಯಿಂದ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಧರ್ಮದರ್ಶನದ ಸಾಲುಗಳಲ್ಲಿ ಕಿಕ್ಕಿರಿದು ಜನ ಗಂಟೆಗಟ್ಟಲೆ ನಿಲ್ಲುವುದು ತಪ್ಪಿದೆ ಎಂದು ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ತಿಳಿಸಿದರು.ಶನಿವಾರ ಬೆಳಿಗ್ಗೆ ದರ್ಶನಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ನಗರದ ಸಂತೇಪೇಟೆ ವೃತ್ತದ ಬಿ. ಎಂ. ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ಗಳ ಸಾಲುಗಳು ಬಹುತೇಕ ಖಾಲಿಯಾಗಿದ್ದವು. ಹೊಸಲೈನ್ ರಸ್ತೆ ಕಡೆಯೂ ಕೆಲವು ಸರತಿ ಸಾಲುಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಭಕ್ತರ ಆಗಮನದಲ್ಲಿ ಗಣನೀಯ ಏರಿಕೆ ಕಂಡುಬಂದಿತು. ಒಂದು ಸಾವಿರ ರು. ಟಿಕೆಟ್ ದರ್ಶನದ ಸರತಿ ಸಾಲಿನಲ್ಲಿ ಜನದಟ್ಟಣೆ ಕಡಿಮೆ ಇದ್ದರೆ, ೩೦೦ ರು. ಟಿಕೆಟ್ ದರ್ಶನದ ಸಾಲಿನಲ್ಲಿ ಹೆಚ್ಚಿನ ಭಕ್ತರು ಕಂಡುಬಂದರು. ದರ್ಶನ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಅವರು ಖುದ್ದಾಗಿ ವಿವಿಧ ಸರತಿ ಸಾಲುಗಳನ್ನು ಪರಿಶೀಲಿಸಿದರು. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಅಲ್ಲದೆ, ಸಿಸಿ ಕ್ಯಾಮೆರಾಗಳ ಮೂಲಕವೂ ಭಕ್ತರ ಸರತಿ ಸಾಲುಗಳ ಚಲನವಲನವನ್ನು ನಿರಂತರವಾಗಿ ವೀಕ್ಷಿಸಿ ವ್ಯವಸ್ಥೆಯ ಮೇಲೆ ನಿಗಾ ವಹಿಸಿದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಬೆಳಿಗ್ಗೆ ೬.೩೦ರಿಂದ ೭ ಗಂಟೆಗೆ ಆರಂಭವಾಗುತ್ತಿದ್ದ ದೇವಿಯ ದರ್ಶನವನ್ನು ಈ ಬಾರಿ ಮುಂಜಾನೆ ೪ ಗಂಟೆಯಿಂದಲೇ ಆರಂಭಿಸಲಾಗಿದೆ. ಇದರಿಂದ ಭಕ್ತರಿಗೆ ಹೆಚ್ಚಿನ ಸಮಯಾವಕಾಶ ದೊರೆತಿದ್ದು, ದರ್ಶನ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಹಕಾರಿಯಾಗಿದೆ. ಶುಕ್ರವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರೂ ಸರತಿ ಸಾಲುಗಳ ನಿರ್ವಹಣೆ ಅಚ್ಚುಕಟ್ಟಾಗಿತ್ತು. ಶನಿವಾರ ಮತ್ತು ಭಾನುವಾರ ವಾರಾಂತ್ಯದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಜನದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಮಯ ನಿರ್ವಹಣೆ ಮತ್ತು ಸರತಿ ಸಾಲುಗಳ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ವಿಕಲಚೇತನರಿಗೆ ಮತ್ತು ೮೦ ವರ್ಷ ದಾಟಿದ ವೃದ್ಧರಿಗೆ ಹೊಸಲೈನ್ ರಸ್ತೆ ಬಳಿ ೩೦೦ ರು. ಟಿಕೆಟ್ ಮೂಲಕ ಬರುವ ದಾರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ಸೇವಕರು ಕರೆದುಕೊಂಡು ಹೋಗಿ ದರ್ಶನ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಿತರಿಸಲಾಗುತ್ತಿರುವ ಲಾಡು ಪ್ರಸಾದದ ದರವನ್ನು ಸಚಿವರು ಇಳಿಕೆ ಮಾಡಿರುವ ಕ್ರಮಕ್ಕೂ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಭಕ್ತರ ಅನುಕೂಲಕ್ಕೆ ಪೂರಕವಾಗಿ ಕೈಗೊಂಡಿರುವ ಬದಲಾವಣೆಗಳು ಈ ಬಾರಿಯ ದರ್ಶನೋತ್ಸವಕ್ಕೆ ವಿಶೇಷ ಮೆರುಗು ನೀಡಿವೆ ಎಂದರು.