ಕಾಡುಪ್ರಾಣಿಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರ ಕ್ರಮ : ಅರಣ್ಯ ಸಚಿವ ಈಶ್ವರ್‌ ಖಂಡ್ರೆ

| N/A | Published : Mar 03 2025, 01:51 AM IST / Updated: Mar 03 2025, 11:25 AM IST

ಸಾರಾಂಶ

ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ವೀರಶೈವ ಲಿಂಗಾಯಿತ ಸೇವಾ ಸಮಾಜದ ಮುಖಂಡರು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರನ್ನು ಸನ್ಮಾನಿಸಿದರು.

 ಚಳ್ಳಕೆರೆ : ಉತ್ತರ ಕರ್ನಾಟಕ ಲಿಂಗಾಯಿತ ಸಮುದಾಯದ ಹಿರಿಯ ಮುಖಂಡ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹುಬ್ಬಳಿಯಿಂದ ಚಳ್ಳಕೆರೆ ಮೂಲಕ ಹಿರಿಯೂರಿಗೆ ತೆರಳುವ ಸಂದರ್ಭದಲ್ಲಿ ಚಳ್ಳಕೆರೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ ತಾಲೂಕಿನ ಕಾಂಗ್ರೆಸ್ ಮುಖಂಡರು, ವೀರಶೈವ ಲಿಂಗಾಯಿತ ಸೇವಾ ಸಮಾಜದ ನೇತಾರರು ಆಗಮಿಸಿ ಸಚಿವರೊಂದಿಗೆ ಲೋಕಾಭಿರಾಮವಾಗಿ ಚರ್ಚೆ ನಡೆಸಿದರು.

ಪ್ರಾರಂಭದಲ್ಲಿ ವೀರಶೈವ ಲಿಂಗಾಯಿತ ಸಮುದಾಯದಿಂದ ಅರಣ್ಯ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತರುವ ಮೂಲಕ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಿದ, ಕಾಡು ಪ್ರಾಣಿಗಳಿಂದ ಪ್ರಾಣ ಕಳೆದುಕೊಂಡವರಿಗೂ ಸಹ ಹೆಚ್ಚಿನ ಪ್ರಮಾಣದ ಪರಿಹಾರ ಧನವನ್ನು ನೀಡಿ ಅವರ ಕುಟುಂಬಗಳಿಗೆ ಸಹಕಾರ ನೀಡಿದ್ದಕ್ಕೆ ಸಚಿವರನ್ನು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ರಾಜ್ಯ ಸರ್ಕಾರ ನನಗೆ ಅರಣ್ಯ ಇಲಾಖೆ ಜವಾಬ್ದಾರಿಯನ್ನು ನೀಡಿದ್ದು, ಇಲಾಖೆಯನ್ನು ಸುಸ್ಥಿತಿಯಲ್ಲಿ ನಡೆಸುವ ದೃಷ್ಠಿಯಿಂದ ಹಲವಾರು ಸುಧಾರಣೆಗಳನ್ನು ತರಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಪ್ರವೇಶಿಸುತ್ತಿದ್ದು ಅವುಗಳನ್ನು ನಿಯಂತ್ರಿಸಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರೊಂದಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಭರಮಸಾಗರದ ಎಸ್‌ಎಂಎಲ್ ತಿಪ್ಪೇಸ್ವಾಮಿಯವರನ್ನು ಅಭಿನಂದಿಸಿದರು.

ಈ ವೇಳೆ ಉಪಾಧ್ಯಕ್ಷ ಕೆ.ಎಂ.ಜಗದೀಶ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರಸನ್ನಕುಮಾರ್, ಕಾರ್ಯದರ್ಶಿ ಕೆ.ಈಶ್ವರಪ್ಪ, ಖಜಾಂಚಿ ಬಿ.ಜೆ.ಇಂಧುಶೇಖರ್, ನಿರ್ದೇಶಕರಾದ ಕೆ.ಎಂ.ಕೋಟ್ರೇಶ್, ಬಿ.ಜೆ.ವೃಷಬೇಂದ್ರಪ್ಪ, ಮಾತೃಶ್ರೀ ಮಂಜುನಾಥ, ಕೆ.ಪಿ.ಲೋಕೇಶ್, ಕೆ.ಟಿ.ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.