ಸಾರಾಂಶ
ಹರಪನಹಳ್ಳಿ: ಪೌರಕಾರ್ಮಿಕರಿಗೆ ಶೀಘ್ರ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ಸೋಮವಾರ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಪೌರಕಾರ್ಮಿಕರಿಗೆ ಸೂರು ಕಲ್ಪಿಸಲು ಈಗಾಗಲೇ 5 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಆದಷ್ಟು ಬೇಗ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.ಪೌರ ಕಾರ್ಮಿಕರ ಇತರ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಬಳಿ ಮಾತನಾಡುವುದಾಗಿ ತಿಳಿಸಿದರು. ಹರಪನಹಳ್ಳಿ ಪಟ್ಟಣದಲ್ಲಿ ಪಿ.ಜಿ. ಸೆಂಟರ್ ಅನ್ನು ಆರಂಭಿಸಲಾಗಿದೆ. ಆದ್ದರಿಂದ ಪೌರ ಕಾರ್ಮಿಕರು ಮಕ್ಕಳನ್ನು ಇಲ್ಲಿಯೇ ಪಿ.ಜಿ. ವರೆಗೂ ಓದಿಸಬಹುದು. ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿ ಎಂದು ಸಲಹೆ ನೀಡಿದರು.
ತಮ್ಮ ದಿನ ನಿತ್ಯದ ಕಾಯಕದ ಜೊತೆ ಮಾಸ್ಕ್, ಗ್ಲೌಸ್, ಜಾಕೆಟ್ ಉಪಯೋಗಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಪೌರ ಕಾರ್ಮಿಕರಿಗೆ ತಿಳಿಸಿದರು.ಪುರಸಭಾ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಯೋಧರು ಗಡಿ ಕಾಪಾಡಿದರೆ ಪೌರ ಕಾರ್ಮಿಕರು ನಮ್ಮ ಆರೋಗ್ಯ ಕಾಪಾಡುವರು. ಪೌರ ಕಾರ್ಮಿಕರ ವೃತ್ತಿ ವಂಶಪಾರಂಪರ್ಯವಾಗಬಾರದು. ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ನೀಡಿ ಉನ್ನತ ಹುದ್ದೆಗಳಿಗೆ ಹೋಗುವಂತೆ ಮಾಡಿ ಎಂದು ಹೇಳಿದರು.
ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು, ಕ್ಲೀನರ್, ಚಾಲಕರನ್ನು ಪೌರ ಕಾರ್ಮಿಕರೆಂದು ಪರಿಗಣಿಸಬೇಕು. ಜ್ಯೋತಿ ಸಂಜೀವಿನಿ ಯೋಜನೆಯಡಿ ಸೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಪೌರ ಕಾರ್ಮಿಕರ ಪರವಾಗಿ ಶಾಸಕರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.ಹಿರಿಯ ಸದಸ್ಯ ಅಬ್ದುಲ್ ರಹಿಮಾನ್ ಮಾತನಾಡಿ, ಪೌರಕಾರ್ಮಿಕರು ವೈದ್ಯರಿದ್ದಂತೆ. ಬೆಳಗಿನ ಜಾವ ನಗರವನ್ನು ಸ್ವಚ್ಛ ಮಾಡಿ ಜನತೆಯ ಆರೋಗ್ಯ ಕಾಪಾಡುತ್ತಾರೆ. ಇಂತಹವರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಸಿಗಬೇಕು ಎಂದು ಹೇಳಿದರು.
ಸದಸ್ಯ ಜಾಕೀರ್ ಹುಸೇನ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಪೌರ ಕಾರ್ಮಿಕರು ಸೈನಿಕರಂತೆ ಕೆಲಸ ಮಾಡಿದರು ಎಂದು ಸ್ಮರಿಸಿದ ಅವರು ದುಶ್ಚಟಕ್ಕೆ ಬಲಿಯಾಗದೆ ಅಭಿವೃದ್ಧಿ ಹೊಂದಿ ಎಂದು ಹೇಳಿದರು.ಪುರಸಭಾ ವ್ಯವಸ್ಥಾಪಕ ಅಶೋಕ ಮಾತನಾಡಿದರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು. ಸಿಆರ್‌ಪಿ ಸಲೀಂ ಸ್ವಾಗತಿಸಿದರು.
ಪುರಸಭಾ ಸದಸ್ಯರಾದ ಲಾಟಿ ದಾದಾಪೀರ, ಭರತೇಶ, ಮಂಜುನಾಥ ಇಜಂತಕರ್, ಕೊಟ್ರೇಶ, ಕಿರಣ್ ಶಾನ್ ಬಾಗ್, ವಿನಯ ಗೌಳಿ, ಹನುಮವ್ವ, ಶೋಭಾ, ಜಾವೇದ್ ಹಾಗೂ ಶೆಕ್ಷಾವಲಿ, ವಾಗೀಶ, ಹನುಮಂತಪ್ಪ, ಚಿಕ್ಕೇರಿ ಬಸಪ್ಪ, ಮಲ್ಲೆಪ್ಪ, ಮತ್ತೂರು ಬಸವರಾಜ, ಯುವ ಮುಖಂಡ ಸೈಯದ್ ಇರ್ಫಾನ್ ಉಪಸ್ಥಿತರಿದ್ದರು.