ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹನುಮಸಾಗರ ಗ್ರಾಮದ ಸರ್ಕಾರಿ ಇನಾಂ ಜಮೀನಿನ ಸರ್ವೆ ನಂ 122ರಲ್ಲಿ ಸಾಗುವಳಿ ಮಾಡುತ್ತಿದ್ದ 64 ರೈತರಿಗೆ ಮೊದಲ ಹಂತದಲ್ಲಿ ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಸಾಗುವಳಿ ಚೀಟಿ ವಿತರಿಸಿದರು.ಶಾಸಕ ಡಿ.ಜಿ.ಶಾಂತನಗೌಡ ರೈತರಿಗೆ ಸಾಗುವಳಿ ಪತ್ರ ವಿತರಿಸಿ ಮಾತನಾಡಿ, ಕಳೆದ 50-60 ವರ್ಷಗಳಿಂದ ತಾತನ ಕಾಲದಿಂದಲ್ಲೂ ಜಮೀನು ಮಾಡಿಕೊಂಡು ಬರುತ್ತಿದ್ದೀರಿ ನಿಮಗೆ ಹಕ್ಕುಪತ್ರ ಕೊಡುತ್ತಿರುವುದಕ್ಕೆ ನನಗೆ ಸಂತಸ ಉಂಟಾಗಿದೆ. ಯಾರು ಅರ್ಹ ಫಲಾನುಭವಿಗಳಿದ್ದಾರೋ ಅಂತಹವರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬುದು ನನ್ನ ಆಶಯ. ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ಸಾಗುವಳಿ ಚೀಟಿ ನೀಡುತ್ತಿದ್ದೇನೆ, ಬಾಕಿ ಇರುವ ರೈತರಿಗೂ ಕಾನೂನಿನ ತೊಡಕುಗಳ ನೋಡಿ ಅಂತಹ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸಿ ಶೀಘ್ರವೇ ಬಾಕಿ ಇರುವ ರೈತರಿಗೂ ಸಾಗುವಳಿ ಚೀಟಿ ನೀಡುತ್ತೇನೆ ಎಂದು ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಶಾಸಕರ ಪರಿಶ್ರಮದಿಂದ 64 ಮಂದಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುತ್ತಿದ್ದೇವೆ, ಯಾರು ಆತ್ಮವಿಶ್ವಾಸ ಕಳೆದುಕೊಳ್ಳದೆ 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೋ ಅಂತಹವರಿಗೆ ಹಕ್ಕುಪತ್ರ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ನೀವೇ ಉದಾಹರಣೆ ಎಂದರು.ಹನುಮಸಾಗರ ಗ್ರಾಮದ ಸರ್ವೆ ನಂ.122ರಲ್ಲಿ ಇನಾಂ ಜಮೀನು ಪಟ್ಟಕ್ಕಾಗಿ ಒಟ್ಟು 251 ಅರ್ಜಿಗಳು ಬಂದಿದ್ದು, ಈ ಪೈಕಿ ಇದೀಗ 64 ರೈತರಿಗೆ 125 ಎಕರೆ 3 ಗುಂಟೆ ವಿಸ್ತೀರ್ಣದ ಜಮೀನಿನ ಹಕ್ಕುಪತ್ರ ನೀಡುತ್ತಿದೆ ಎಂದರು. ಈ ಸಾಗುವಳಿದಾರರು ಗುಡ್ಡಗಾಡು ಪ್ರದೇಶದಲ್ಲಿ ಸರ್ಕಾರಿ ಭೂಮಿ ಸ್ವಚ್ಚ ಹಾಗೂ ಹದ ಮಾಡಿ ಬೆಳೆ ಬೆಳೆಯುತ್ತಿದ್ದಿರಿ, ಆದರೆ ಈಗ ನಿಮಗೆ ಹಕ್ಕುಪತ್ರ ಸಿಕ್ಕಿದೆ ಎಂದರು.
ಬಗರ್ ಹುಕುಂ ಸಮಿತಿ ಸದಸ್ಯರಾದ ಸಣ್ಣಕ್ಕಿ ಬಸವನಗೌಡ, ಕೊಡತಾಳ್ ರುದ್ರೇಶ್, ಪುಷ್ಪಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಕಾಂಗ್ರೆಸ್ ಮುಖಂಡರಾದ ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ, ಪುರಸಭೆ ಮಾಜಿ ಸದಸ್ಯ ವಿಜೇಂದ್ರಪ್ಪ ಹಾಗೂ ಸದಸ್ಯರ ಇತರರಿದ್ದರು.ಹೊನ್ನಾಳಿ ತಾಲೂಕಿನ ಹನುಮಸಾಗರ ಗ್ರಾಮದ ಸರ್ವೆ ನಂ 122 ರಲ್ಲಿ ಇದ್ದ 360 ಎಕರೆ ಸರ್ಕಾರಿ ಜಮೀನಿನಲ್ಲಿ ಹಕ್ಕುಪತ್ರಕ್ಕಾಗಿ 251 ಅರ್ಜಿಗಳಿದ್ದು, ಈಗ 64 ಜನ ರೈತರಿಗೆ ಸಾಗುವಳಿ ಚೀಟಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದ 187 ಮಂದಿ ಸಾಗುವಳಿದಾರರಿಗೆ ಶೀಘ್ರವೇ ಹಕ್ಕುಪತ್ರ ನೀಡಲಾಗುವುದು.
ಪಟ್ಟರಾಜಗೌಡ, ತಹಸೀಲ್ದಾರ್------