ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ವಿತರಣೆ: ಆರ್‌. ಅಶೋಕ್‌ ಒತ್ತಾಯ

| Published : Aug 01 2024, 12:31 AM IST

ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ವಿತರಣೆ: ಆರ್‌. ಅಶೋಕ್‌ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳದ ಆಯ್ದ ನೆರೆಪೀಡಿತ ಪ್ರದೇಶಗಳಿಗೆ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಭೇಟಿ ನೀಡಿದ ಅವರು, ಬಳಿಕ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ರಾಜ್ಯದ ವಿವಿಧೆಡೆ ಪ್ರಾಕೃತಿಕ ವಿಕೋಪದಿಂದ ಭಾರಿ ಹಾನಿ ಸಂಭವಿಸಿದ್ದು, ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ವಿತರಿಸಬೇಕು ಎಂದು ರಾಜ್ಯ ವಿಪಕ್ಷ ನಾಯಕ ಆರ್‌. ಅಶೋಕ್‌ ಒತ್ತಾಯಿಸಿದ್ದಾರೆ.

ಬಂಟ್ವಾಳದ ಆಯ್ದ ನೆರೆಪೀಡಿತ ಪ್ರದೇಶಗಳಿಗೆ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಭೇಟಿ ನೀಡಿದ ಅವರು, ಬಳಿಕ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಕಾಂಗ್ರೇಸ್‌ ಸರ್ಕಾರದ ಅಕ್ರಮಗಳಿಗೆ ಸ್ಪಷ್ಟನೆ ನೀಡಲು ಹೋಗಿರುವ ಮುಖ್ಯಮಂತ್ರಿಯವರು, ತಕ್ಷಣವೇ ದೆಹಲಿ ಪ್ರವಾಸವನ್ನು ಕೈ ಬಿಟ್ಟು ರಾಜ್ಯಕ್ಕೆ ಬರಬೇಕು, ಮೊದಲು ಜನರ ಸಮಸ್ಯೆ ಆಲಿಸುವಂತೆ ಅವರು ಕರೆ ನೀಡಿದರು. ರಾಜ್ಯದಲ್ಲಿ ಆಗಿರೋ ಮಳೆಹಾನಿ ವೀಕ್ಷಣೆಗೆ ಬಂದಿದ್ದೇನೆ, ಮಳೆಯಿಂದಾಗಿ ರಾಜ್ಯದಲ್ಲಿ ದೊಡ್ಡ ರೀತಿಯ ಹಾನಿ ಯಾಗಿದೆ ಸಾವಿನ ಜೊತೆಗೆ ಹಲವು ರೀತಿಯಲ್ಲಿ ರಾಜ್ಯದಲ್ಲಿ ಹಾನಿ ಆಗಿದೆ. ನಾನು ಕಂದಾಯ ಸಚಿವ ಆಗಿದ್ದಾಗ ರಾಜ್ಯ ಹಾಗೂ ಕೇಂದ್ರದಿಂದ ಸಮಾನ ಅನುದಾನ ಕೊಡ್ತಾ ಇದ್ದೆವು. ಹಿಂದೆ ನಮ್ಮ ಕಾಂಗ್ರೆಸ್ ಮಿತ್ರರು ತೆರೆಯುತ್ತಿದ್ದ ಗಂಜಿಕೇಂದ್ರವನ್ನು ತಾನು ಕಂದಾಯ ಸಚಿವನಾಗಿದ್ದ ಅವಧಿಯಲ್ಲಿ ಅದನ್ನು ಬದಲಿಸಿ ಕಾಳಜಿ ಕೇಂದ್ರ ಮಾಡಿ ಮನೆ ಊಟ ಕೊಟ್ಟಿದ್ದೆ, ಆದರೆ ಈಗ ಅಂಥದ್ದು ಎಲ್ಲೂ ನಮಗೆ ಕಾಣಿಸ್ತಾ ಇಲ್ಲ ಎಂದವರು ಆರೋಪಿಸಿದರು.

ದ.ಕ.ಉಸ್ತುವಾರಿ ಸಚಿವರು ಕಾಣ್ತಾ ಇಲ್ಲ: ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಮಂಗಳೂರಿಗೆ ಬರದೇ 15 ದಿನ ಮೇಲಾಗಿದೆ, ಅವರ ಹೈಕಮಾಂಡ್ ಜಿಲ್ಲಾ ಮಂತ್ರಿ ಸ್ಥಳದಲ್ಲಿರಲು ಹೇಳಿದರೂ, ಜಿಲ್ಲಾ ಮಂತ್ರಿಗಳು ಜನರ ಜೊತೆಗೆ ಕಾಣುತ್ತಿಲ್ಲ ಎಂದು ಟೀಕಿಸಿದರು.

ರಮಾನಾಥ್ ರೈ ಆವತ್ತು ಪರಿಹಾರದ ವಿಚಾರದಲ್ಲಿ ಜಗಳ ಮಾಡಿದ್ದರು, ಸರ್ಕಾರ ಐದು ಲಕ್ಷ ಕೊಡೋದು ಕಂಜೂಸ್ ತನ ಅಂದಿದ್ದರು. ಆದರೆ ಈಗ ಇವರ ಸರ್ಕಾರ ಮೋದಿಯವರ 1.25 ಲಕ್ಷ ಕೊಡ್ತಾ ಇದೆ, ಆದರೆ ರಾಜ್ಯ ಸರ್ಕಾರ ಏನ್ ಕೊಡ್ತಾ ಇದೆ, ನಿಮಗೆ ನಾಚಿಕೆ ಇಲ್ವಾ?ಹಾಗಿದ್ರೆ ಪ್ರವಾಹದ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು? ಈ ಸರ್ಕಾರ ಬದುಕಿದೆ ಅಂತ ಜನರಿಗೆ ಆಗ್ತಿಲ್ಲ, ಇದನ್ನು ಜನ ಗಮನಿಸ್ತಾ ಇದಾರೆ. ಸರ್ಕಾರ ತಕ್ಷಣ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ಟಾಸ್ಕ್‌ ಪೋರ್ಸ್‌ ಸಮಿತಿ ರಚನೆ ಮಾಡಿ. ಪ್ರತೀ ಸಮಿತಿಗೂ ಐದು ಕೋಟಿ ಅನುದಾನ ಕೊಡಿ ಎಂದವರು ಆಗ್ರಹಿಸಿದರು. ಪಕ್ಷದ ವತಿಯಿಂದ ರಾಜ್ಯದ ಎಲ್ಲ ಕಡೆ ಪ್ರವಾಸ ಮಾಡಿ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪದ ಅಧ್ಯಯನ ನಡೆಸಲಾಗುತ್ತಿದ್ದು, ಎಲ್ಲೆಲ್ಲಿ ತಪ್ಪಾಗಿದೆಯೋ ಅದನ್ನ ಸರ್ಕಾರದ ಗಮನಕ್ಕೆ ತರ್ತೇವೆ, ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಆರ್‌. ಅಶೋಕ್‌ ತಿಳಿಸಿದರು. ತಾನು ಸಚಿವನಾಗಿದ್ದ ಅವಧಿಯಲ್ಲಿ ಆರು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಪ್ರವಾಹ ಪರಿಹಾರಕ್ಕೆ ನೀಡಲಾಗಿತ್ತು ಎಂದವರು ಈ ಸಂದರ್ಭ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೈಕಮಾಂಡ್‌ ಸೂಚನೆಯಂತೆ ಕೆಲಸ: ಅಶೋಕ್‌

ಬಂಟ್ವಾಳ: ಜೆಡಿಎಸ್‌ ಎನ್‌ ಡಿಎ ಮೈತ್ರಿಕೂಟದಲ್ಲಿ ಸೇರಿಕೊಂಡಿರುವ ಪಕ್ಷ, ಹೀಗಾಗಿ ನಮ್ಮ ಪಕ್ಷದ ಹೈಕಮಾಂಡ್‌ ಸೂಚನೆಯಂತೆ ಕಾರ್ಯ ನಿರ್ವಹಿಸುವುದು ನಮ್ಮ ಕೆಲಸ. ಹಾಗಾಗಿ ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ ಎಂದು ರಾಜ್ಯ ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು.ಬಿಜೆಪಿ ಪಾದಯಾತ್ರೆ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಪಸ್ವರ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡರು ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ. ಕೃಷಿ, ಮಳೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮುಂದೂಡಿ ಅಂದಿದ್ದಾರೆ.ನಾವು ಕೂಡ ಕೇಂದ್ರದ ನಾಯಕರ ಜೊತೆ ಈ ಬಗ್ಗೆ ಮಾತನಾಡ್ತೀವಿ ಎಂದರು. ಸಾವಿರಾರು ಕೋಟಿಯ ಭ್ರಷ್ಟಾಚಾರ ಆಗಿದೆ, ಸಂವಿಧಾನ ಕಾಪಾಡೋ ಸ್ಥಾನದಲ್ಲಿ ಸಿಎಂ ಇದಾರೆ, ನಾವು ಅನ್ಯಾಯ ಮಾಡಲ್ಲ ಅಂತೆಲ್ಲಾ ಪ್ರಮಾಣ ವಚನ ಸ್ವೀಕರಿಸ್ತಾರೆ, ಆದರೆ ಇಷ್ಟು ದೊಡ್ಡ ಹಗರಣ ಮಾಡಿ ಜನರ ಹಣ ಲೂಟಿ ಮಾಡಿದ್ದಾರೆ.ಸದನದ ಒಳಗೂ ಎಲ್ಲರ ಜೊತೆಗೂ ಮಾತನಾಡಿ, ಕಾಂಗ್ರೆಸ್ ನವರು ಬಾಯಿ ಮುಚ್ಚೋ ರೀತಿಯಲ್ಲಿ ಹೋರಾಟ ಆಗಿದೆ, ಇದೇ ಬಿಸಿಯಲ್ಲೇ ಹೋರಾಟ ಆಗಬೇಕು, ಜೆಡಿಎಸ್ ಕೂಡ ಎನ್‌ಡಿಎ ಭಾಗ, ಹೀಗಾಗಿ ಅವರು ಹೋರಾಟದಲ್ಲಿ ಒಟ್ಟಿಗೆ ಇರಬೇಕು ಅನ್ನೋದು ನಮ್ಮ ಆಸೆ, ನಾನು ಕುಮಾರಸ್ವಾಮಿ ಜೊತೆ ಮಾತನಾಡಿ ಸಂಜೆಯೊಳಗೆ‌ ನಿರ್ಧಾರಕ್ಕೆ ಬರ್ತೇವೆ. ಕಾಂಗ್ರೆಸ್ ನಾಯಕ ಬಿ.ಕೆ.ಹರಿ ಪ್ರಸಾದ್ ಕೂಡ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡ್ತಾ ಇದಾರೆ, ಮೊದಲು ಇವರ ಸರ್ಕಾರ ಉಳಿಯುತ್ತೋ ನೋಡುವ ಇವರು ತಪ್ಪು ಮಾಡದೇ ದೆಹಲಿಗೆ ಹೋಗಿದಾರಾ? ಭಿನ್ನಮತ ಇರೋದಕ್ಕೆ ದೆಹಲಿಗೆ ಹೋಗಿದ್ದಾರೆ. ಯತ್ನಾಳ್ ಮತ್ತು ಜಾರಕಿಹೊಳಿ ಹೈಕಮಾಂಡ್ ಒಕೆ ಅಂದ್ರೆ ಪಾದಯಾತ್ರೆ ಅಂದಿದ್ದಾರೆ, ಹೈಕಮಾಂಡ್ ಓಕೆ ಅಂದ್ರೆ ನಾವು ಮತ್ತೆ ನೋಡೋಣ ಎಂದ ಅವರು, ಪ್ರೀತಂ ಗೌಡ ಬಗ್ಗೆ ಜೆಡಿ ಎಸ್ ಗೆ ಯಾಕೆ ವಿರೋಧ ಇದೆ ನನಗೆ ಗೊತ್ತಿಲ್ಲ ಈ ಬಗ್ಗೆ ದೆಹಲಿ ಮಟ್ಟದ ನಾಯಕರು ನೋಡಿಕೊಳ್ತಾರೆ ಎಂದರು.

ಇವತ್ತು ಸಂಜೆಯ ಒಳಗೆ ಪಾದಯಾತ್ರೆ ಬಗ್ಗೆ ನಿರ್ಧಾರ ಆಗುತ್ತೆ, ಪಾದಯಾತ್ರೆ ಆಗುತ್ತೆ, ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಆದರೆ ಯಾವಾಗ ಪಾದಯಾತ್ರೆ ಆಗುತ್ತೆ ಅನ್ನೋದಷ್ಟೇ ಈಗ ಇರುವ ವಿಚಾರ ಎಂದರು.ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ರಾಜೇಶ್‌ ನಾಯ್ಕ್‌, ಪ್ರತಾಪ ಸಿಂಹ ನಾಯ್ಕ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್‌, ಪೂಜಾ ಪೈ, ಸುಲೋಚನಾ ಭಟ್‌, ಹರಿಕೃಷ್ಣ ಬಂಟ್ವಾಳ್‌, ಜೆಡಿಎಸ್‌ ಮುಖಂಡ ರಕ್ಷಿತ್‌ ಸುವರ್ಣ ಮೊದಲಾದವರಿದ್ದರು.