ನರೇಗಲ್ ಬಸ್ ನಿಲ್ದಾಣಕ್ಕೆ ಶೀಘ್ರ ಕಾಯಕಲ್ಪ: ದೇವರಾಜ

| Published : Mar 30 2024, 12:56 AM IST

ಸಾರಾಂಶ

ಈಗ ಕೆಲವು ದಿನಗಳಿಂದ ಗಜೇಂದ್ರಗಡ-ಗದಗ ತಡೆ ರಹಿತ ಬಸ್‌ನ್ನು ಓಡಿಸುತ್ತಿದ್ದಿರಿ. ಮಧ್ಯದಲ್ಲಿ ನರೇಗಲ್ಲ ಒಂದು ದೊಡ್ಡ ಊರಾಗಿದೆ. ಇಲ್ಲಿಗೆ ಒಂದು ಸ್ಟಾಪ್‌ನ್ನು ನೀಡಿ ಬಸ್ ಓಡಿಸಿ ಎಂದು ಸಲಹೆ

ನರೇಗಲ್: ನರೇಗಲ್ ಬಸ್ ನಿಲ್ದಾಣ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಅದಕ್ಕೆ ಶೀಘ್ರವೇ ಕಾಯಕಲ್ಪ ನೀಡಲಾಗುವುದು ಎಂದು ಗದಗ ಜಿಲ್ಲಾ ಕರ್ನಾಟಕ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಕ ದೇವರಾಜ್ ಹೇಳಿದರು.

ಅವರು ಗುರುವಾರ ಸ್ಥಳೀಯ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿ ಮಾತನಾಡಿದ ಅವರು, ನಿಲ್ದಾಣದಲ್ಲಿನ ಕಸದ ಡಬ್ಬಿ ತುಂಬಿ ತುಳುಕುತ್ತಿದ್ದರೂ ಸ್ವಚ್ಛ ಮಾಡಿಸದ ಸಾರಿಗೆ ನಿಯಂತ್ರಕರನ್ನು ತರಾಟೆಗೆ ತೆಗದುಕೊಂಡರು. ಕಸ ಅಲ್ಲಲ್ಲೆ ಗುಂಪುಗೂಡಿಸಿ ಬೆಂಕಿ ಹಚ್ಚಿದ್ದನ್ನು ಕಂಡು ಇದರಿಂದ ಪ್ರಯಾಣಿಕರ ಆರೋಗ್ಯಕ್ಕೆ ಮಾರಕವಾಗುವುದೆಂದು ಸಾರಿಗೆ ನಿಯಂತ್ರಕರನ್ನು ಎಚ್ಚರಿಸಿದರು.

ನಿಲ್ದಾಣದಲ್ಲಿ ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಲ್ಲುವುದನ್ನು ಕಂಡ ಡಿಸಿಯವರು ಇಂದಿನಿಂದ ಎಲ್ಲ ಬಸ್‌ಗಳನ್ನೂ ಪ್ಲಾಟ್‌ಫಾರ್ಮ್‌ಗೆ ಹಚ್ಚಲು ಚಾಲಕರಿಗೆ ತಿಳಿಸಬೇಕೆಂದು ತಾಕೀತು ಮಾಡಿದರು. ಶೌಚಾಲಯದ ವ್ಯವಸ್ಥೆ ಖುದ್ದಾಗಿ ಪರಿಶೀಲಿಸಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಶೌಚಾಲಯ ಸಿಬ್ಬಂದಿಗೆ ತಿಳಿಸಿ ಅದನ್ನು ಸರಿಪಡಿಸಲು ಹೇಳಿದರು. ನಿಲ್ದಾಣದಲ್ಲಿ ಬಿದ್ದ ಗೋಡೆ ತಕ್ಷಣವೆ ಸರಿಪಡಿಸಲು ಸಾರಿಗೆ ನಿಯಂತ್ರಿಕರಿಗೆ ತಿಳಿಸಿ, ತಮ್ಮೊಂದಿಗೆ ಬಂದಿದ್ದ ಎಂಜಿನೀಯರ್ ಗೆ ಈ ಎಲ್ಲ ಕೆಲಸಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಸೂಚಿಸಿದರು.

ಮುಖಂಡ ನಿಂಗಪ್ಪ ಲಕ್ಕನಗೌಡ್ರ ಮಾತನಾಡಿ, ಈಗ ಕೆಲವು ದಿನಗಳಿಂದ ಗಜೇಂದ್ರಗಡ-ಗದಗ ತಡೆ ರಹಿತ ಬಸ್‌ನ್ನು ಓಡಿಸುತ್ತಿದ್ದಿರಿ. ಮಧ್ಯದಲ್ಲಿ ನರೇಗಲ್ಲ ಒಂದು ದೊಡ್ಡ ಊರಾಗಿದೆ. ಇಲ್ಲಿಗೆ ಒಂದು ಸ್ಟಾಪ್‌ನ್ನು ನೀಡಿ ಬಸ್ ಓಡಿಸಿ ಎಂದು ಸಲಹೆ ನೀಡಿದರು. ಈ ಕುರಿತು ಗಜೇಂದ್ರಗಡ ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ವಿಷ್ಣು ಜಕ್ಕಲಿ ನೇತೃತ್ವದಲ್ಲಿ ಬಸ್ ನಿಲ್ದಾಣದೊಳಗೆ ಒಂದು ಭಾಗದಲ್ಲಿ ಆಟೋ ನಿಲ್ಲಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಕೀರ ಬುಡ್ಡಾ ಗದಗ, ಹುಚ್ಚಪ್ಪ ಬೆಟಗೇರಿ, ಅಬ್ದುಲ್ ರೆಹೆಮಾನ್ ಲಕ್ಕುಂಡಿ, ಮಹಮ್ಮದ್ ನಶೇಖಾನ್, ಮಂಜುನಾಥ ರಾಠೋಡ, ಪ್ರಕಾಶ ಸಂಕನೂರ, ಹುಸೇನ್ ಅತ್ತಾರ, ರಾಮು ಮಣ್ಣೊಡ್ಡರ ಸೇರಿದಂತೆ ಇತರರು ಇದ್ದರು.

ಪ್ರಯಾಣಿಕರಿಗೆ ಸಕಲ ರೀತಿಯ ಅನುಕೂಲತೆ ಒದಗಿಸುವುದು ಇಲಾಖೆಯ ಮೊದಲ ಆದ್ಯತೆಯಾಗಿದೆ. ಅನುಕೂಲತೆ ಬಯಸುವ ಪ್ರಯಾಣಿಕರೂ ಸಹ ಬಸ್‌ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಇಲಾಖೆಯವರೊಂದಿಗೆ ಸಹಕರಿಸಬೇಕು ಎಂದು ವಿಭಾಗೀಯ ಸಾರಿಗೆ ನಿಯಂತ್ರಕ ದೇವರಾಜ್ ಹೇಳಿದರು.