ಗದಗ ನಗರದ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಆವರಣದ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025 ಕಾರ್ಯಕ್ರಮ ನಡೆಯಿತು.
ಗದಗ: ಗ್ರಾಹಕರು ತಾವು ಖರೀದಿಸಿದ ಸಾಮಗ್ರಿ ಗುಣಮಟ್ಟ ಅಥವಾ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಆ ಸಂದರ್ಭದಲ್ಲಿ ಡಿಜಿಟಲ್ ನ್ಯಾಯದ ಆ್ಯಪ್‌ನ ಮೂಲಕ ಪ್ರಕರಣ ದಾಖಲಿಸಿ ತ್ವರಿತ ಹಾಗೂ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಜೆ. ಮಾಲ್ದಾರ ಹೇಳಿದರು.
ನಗರದ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಆವರಣದ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಮತ್ತು ಸಾ.ಸಂ. ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಹಕರು ಯಾವುದೇ ವಸ್ತು ಖರೀದಿಸುವಾಗ ಹಾಗೂ ಸೇವೆ ಪಡೆಯುವಾಗ ಜಾಗೃತೆಯಿಂದ ವ್ಯವಹರಿಸಬೇಕು. ಅದರ ಗುಣಮಟ್ಟ, ಪ್ರಮಾಣ, ವ್ಯಾರಂಟಿ, (expirty date) ಅವಧಿ ಮುಕ್ತಾಯ ಪರಿಶೀಲನೆ ಅತ್ಯವಶ್ಯಕವಾಗಿದೆ. ಗ್ರಾಹಕರಿಗೆ ಅನ್ಯಾಯವಾದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಯಶೋದಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಗ್ರಾಹಕರು ಅತಿವೇಗದಲ್ಲಿ ವ್ಯಾಜ್ಯಗಳನ್ನು ದಾಖಲಿಸಬಹುದು ಹಾಗೂ ಸಂಬಂಧಿತ ವ್ಯಾಜ್ಯದ ಸಾಕ್ಷಿಗಳನ್ನು ಡಿಜಿಟಲ್ ನ್ಯಾಯದ ಆ್ಯಪ್‌ನಲ್ಲಿ ಸಲ್ಲಿಸಬಹುದಾಗಿದೆ. ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿ ಕೊಡುವುದೇ ಇದರ ಮೂಲ ಉದ್ದೇಶವಾಗಿದೆ ಎಂದರು.ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ಮಾತನಾಡಿ, ಪ್ರತಿವರ್ಷ ಡಿ. 24ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಮಾಡಲಾಗುತ್ತದೆ ಹಾಗೂ ಮಾ. 15ರಂದು ವಿಶ್ವ ಗ್ರಾಹಕರ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಗ್ರಾಹಕರ ದಿನಾಚರಣೆ 1986ರಲ್ಲಿ ಆರಂಭವಾಯಿತು. ಸೆಕ್ಷನ್ 67ರ ಪ್ರಕಾರ ಸುಪ್ರೀಂ ಕೋರ್ಟ್‌ನ ಆದೇಶದಂತೆ ಗ್ರಾಹಕರ ಕುಂದು-ಕೊರತೆಗಳ ಪರಿಹಾರಕ್ಕಾಗಿ ಇರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಜಿಲ್ಲಾ, ರಾಜ್ಯ, ಕೇಂದ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಶೋಷಣೆ ತಡೆ, ಕಾಳ ಧನ, ಕಲಬೆರಕೆ, ಹೆಚ್ಚಿನ ಬೆಲೆ ವಸೂಲಿ ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ರಕ್ಷಿಸುವುದು. ನ್ಯಾಯ, ಗ್ರಾಹಕರ ಕುಂದು-ಕೊರತೆಗಳ ಪರಿಹಾರಕ್ಕಾಗಿ ಇರುವ ಆಯೋಗಗಳ ಜಿಲ್ಲಾ, ರಾಜ್ಯ, ಕೇಂದ್ರ ಮಟ್ಟದ ಬಗ್ಗೆ ಮಾಹಿತಿ ನೀಡುವುದು. ಕಾಯಿದೆಗಳ ಜಾರಿ, ಗ್ರಾಹಕ ಸಂರಕ್ಷಣಾ ಕಾಯಿದೆ, 2019ರಂತಹ ಕಾನೂನುಗಳ ಅನ್ವಯದ ಕುರಿತು ವಿವರವಾಗಿ ತಿಳಿಸಿದರು.ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿಗಳ ವಸ್ತು ಪ್ರದರ್ಶನ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದವರ ವತಿಯಿಂದ ಆಹಾರ ಸುರಕ್ಷತೆ ಹಾಗೂ ಆಹಾರ ಕಲಬೆರಕೆ ಕುರಿತು ಭಿತ್ತಿಚಿತ್ರ ಪ್ರದರ್ಶನ, ಜಿಲ್ಲೆಯ ಗ್ಯಾಸ್ ಏಜೆನ್ಸಿಯವರ ವತಿಯಿಂದ ಎಲ್.ಪಿ.ಜಿ. ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಮತ್ತು ಭಿತ್ತಿಚಿತ್ರಗಳ ಪ್ರದರ್ಶನ ನಡೆಯಿತು.
ಆದರ್ಶ ಶಿಕ್ಷಣ ಸಮಿತಿ ಅಧ್ಯಕ್ಷ ಕೆ.ವಿ. ಕುಷ್ಟಗಿ, ಚೇರ್‌ಮನ್ ಎ.ಎಲ್. ಪೋತ್ನೀಸ್, ಕಾರ್ಯದರ್ಶಿ ಎ.ಡಿ. ಗೋಡಖಿಂಡಿ, ಪ್ರಾಂಶುಪಾಲ ಡಾ. ವಿ.ಟಿ. ನಾಯ್ಕರ್, ಡಿ.ಎಸ್. ಕುರ್ತಕೋಟಿ, ಆರ್.ಆರ್. ಕುಲಕರ್ಣಿ, ಎಲ್.ಎಸ್. ರೇಶ್ಮಿ, ಆರ್.ಎಸ್. ಪಟ್ಟಣಶೆಟ್ಟಿ ಇದ್ದರು. ಎಂ.ಎಸ್. ರಮೇಶ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.