ಕಾರ್ಕಳ: ಜನರು ನೇರವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ವೇದಿಕೆಗಳನ್ನು ಸರ್ಕಾರ ಉದ್ದೇಶ ಪೂರ್ವಕವಾಗಿ ರೂಪಿಸಿದೆ. ಗ್ರಾಮ ಮಟ್ಟದ ಸಮಸ್ಯೆಗಳಿಗೆ ಗ್ರಾಮದಲ್ಲೇ ಪರಿಹಾರ ದೊರೆಯಬೇಕು ಎಂಬುದೇ ನಮ್ಮ ಆಶಯ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.ಕಡ್ತಲ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕೆಲವು ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಪರಿಹಾರವಾಗಲಿದ್ದು, ಇನ್ನು ಕೆಲವು ವಿಷಯಗಳನ್ನು ವಿಧಾನಸಭಾ ಸದನದಲ್ಲಿ ಪ್ರಶ್ನೆ ರೂಪದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದರು.
ತೋಟಗಾರಿಕಾ ಇಲಾಖೆಯಿಂದ ಮಂಜೂರಾದ ಸವಲತ್ತುಗಳು, ಆರಿ ಕೌಶಲ್ಯ ತರಬೇತಿ ಪ್ರಮಾಣ ಪತ್ರಗಳು ಹಾಗೂ ಗ್ರಾಪಂನ ಶೇ. 25 ನಿಧಿಯ ಸಹಾಯ ಧನ ವಿತರಣೆ ಜನರ ಬದುಕಿಗೆ ಶಕ್ತಿ ತುಂಬುವ ಕಾರ್‍ಯವಾಗಿದೆ. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಎಂಬುದು ತಮ್ಮ ಬದ್ಧತೆ ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದರು.ಕಾರ್ಕಳ ತಹಸೀಲ್ದಾರ್ ಪ್ರದೀಪ್ ಆರ್, ಮಾತನಾಡಿ, ಸರ್ಕಾರದ ಯೋಜನೆಗಳು ಕೇವಲ ಕಡತಗಳಲ್ಲಿ ಉಳಿಯದೆ ಜನರ ಬದುಕಿಗೆ ತಲುಪಬೇಕು. ಅದಕ್ಕೆ ಅಧಿಕಾರಿಗಳ ಜವಾಬ್ದಾರಿ ಬಹಳ ಮುಖ್ಯಎಂದು ಹೇಳಿದರು.ಭೂಮಿ, ಆದಾಯ ಪ್ರಮಾಣಪತ್ರ, ಪಿಂಚಣಿ, ವಸತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ತಾಲೂಕು ಆಡಳಿತ ಸದಾ ಸಹಕಾರ ನೀಡಲಿದೆ. ಜನರು ಭಯವಿಲ್ಲದೆ ಕಚೇರಿಗಳಿಗೆ ಬರಬೇಕು. ಸಮಸ್ಯೆಗಳಿಗೆ ಪರಿಹಾರ ಪಡೆಯಬೇಕು ಎಂದು ತಹಸೀಲ್ದಾರ್ ಹೇಳಿದರು.
ಕಾರ್ಕಳ ತಾಪಂ ಕಾರ್‍ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಎಂ.ವಿ. ಮಾತನಾಡಿ, ಅಭಿವೃದ್ಧಿ ಕಾರ್‍ಯಗಳು ಯಶಸ್ವಿಯಾಗಲು ಜನಸ್ಪಂದನೆ ಅತ್ಯಂತ ಅಗತ್ಯ. ಅಧಿಕಾರಿಗಳು ಮತ್ತು ಜನರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ. ಗ್ರಾಪಂ ಮಟ್ಟದಲ್ಲಿ ನಡೆಯುವ ಇಂತಹ ಕಾರ್‍ಯಕ್ರಮಗಳು ಜನರ ನಂಬಿಕೆಯನ್ನು ಹೆಚ್ಚಿಸುತ್ತವೆ. ವಿವಿಧ ಇಲಾಖೆಗಳ ಮೂಲಕ ಸಿಗುವ ಸವಲತ್ತುಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಸುಕೇಶ್ ಹೆಗ್ಡೆ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ , ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು.
ಪಿಡಿಒ ಸುರೇಖಾ ಸ್ವಾಗತಿಸಿ, ಗ್ರಾಮ ಆಡಳಿತ ಅಧಿಕಾರಿ ಶ್ರೀ ಪ್ರಶಾಂತ್ ವಂದಿಸಿದರು. ಸದಸ್ಯರಾದ ಸತೀಶ್ ಪೂಜಾರಿ ನಿರೂಪಿಸಿದರು.