ಕನ್ನಡಪ್ರಭ ವಾರ್ತೆ ಬೆಳಗಾವಿ ರಾಜ್ಯದ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಜಂಟಿ ಸಭೆ ನಡೆಸಿ ಇತ್ಯರ್ಥಗೊಳಿಸಲಾಗುವುದು. ಗುತ್ತಿಗೆದಾರರ ರಕ್ಷಣೆ ಮತ್ತು ಸಮಸ್ಯೆಗಳ ಪರಿಹಾರ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಜಂಟಿ ಸಭೆ ನಡೆಸಿ ಇತ್ಯರ್ಥಗೊಳಿಸಲಾಗುವುದು. ಗುತ್ತಿಗೆದಾರರ ರಕ್ಷಣೆ ಮತ್ತು ಸಮಸ್ಯೆಗಳ ಪರಿಹಾರ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶನಿವಾರ ನಡೆದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸುಮಾರು 30 ಸಾವಿರ ಸದಸ್ಯರನ್ನು ಹೊಂದಿರುವ ವಿದ್ಯುತ್ ಗುತ್ತಿಗೆಗಾರರ ಸಂಘವು ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿದೆ. ಹೀಗಾಗಿ, ಗುತ್ತಿಗೆದಾರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ನೂತನ ಪದಾಧಿಕಾರಿಗಳ ಆಡಳಿತಾವಧಿಯಲ್ಲಿ ಸಂಘವು ಇನ್ನಷ್ಟು ಬಲಿಷ್ಠವಾಗಬೇಕು, ಸರ್ಕಾರ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಭರವಸೆ ನೀಡಿದರು.
ಬೆಂಗಳೂರು ಕೇಂದ್ರ ಕಚೇರಿಯೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಘದ ಕಚೇರಿಗಳು ಸ್ಥಾಪನೆಯಾಗಬೇಕು. ಅದರಿಂದ ಗುತ್ತಿಗೆದಾರರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಸಾಧ್ಯವಾಗಲಿದೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ನಿಯೋಗದೊಂದಿಗೆ ಇಂಧನ ಸಚಿವ ಕೆ.ಜೆ ಜಾರ್ಚ್ ಅವರನ್ನು ಭೇಟಿ ಮಾಡಿಸಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಈ ವೇಳೆ ಸಂಘದ ಅಧ್ಯಕ್ಷ ಚಂದ್ರಬಾಬು ಮಾತನಾಡಿ, ಬೆಸ್ಕಾಂ ನಗರ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ, ಗ್ರಾಮಾಂತರ ಪ್ರದೇಶಗಳಲ್ಲಿ ಐಡಿಯಾ ಇನ್ಫಿನಿಟಿ ನೆಟ್ವರ್ಕ್ ಕೊರತೆ, ವಿದ್ಯುತ್ ಪರಿವೀಕ್ಷಣಾಲಯ ಸೇವಾ ಶುಲ್ಕ ಏರಿಕೆ, ಅನುಭವದ ಆಧಾರದ ಮೇಲೆ ದ್ವಿತೀಯ ದರ್ಜೆ ಗುತ್ತಿಗೆದಾರರಿಗೆ ಪ್ರಥಮ ದರ್ಜೆ ಪರವಾನಗಿ ನೀಡುವುದು, ಅಕ್ರಮ ಕೃಷಿ ವಿದ್ಯುತ್ ಸಂಪರ್ಕ ಸಕ್ರಮಗೊಳಿಸುವುದು ಹಾಗೂ ಅಪಘಾತದಲ್ಲಿ ಮೃತಪಟ್ಟ ವಿದ್ಯುತ್ ಕಾರ್ಮಿಕರಿಗೆ ಎಸ್ಕಾಂಗಳಿಂದ ಪರಿಹಾರ ನೀಡುವಂತೆ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹರೀಶ ಪಾಟೀಲ ಸೇರಿದಂತೆ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.-------
ಬಾಕ್ಸ್ರಮೇಶ ಕತ್ತಿ ಹೇಳಿಕೆಗೆ ಉತ್ತರಿಸಲ್ಲ: ಸಚಿವ ಸತೀಶಕನ್ನಡಪ್ರಭ ವಾರ್ತೆ ಬೆಳಗಾವಿ
ಮಾಜಿ ಸಂಸದ ರಮೇಶ ಕತ್ತಿ ಅವರ ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಬಹಳಷ್ಟು ಜನ ಮಾತನಾಡುತ್ತಾರೆ. ಅವರ ಹೇಳಿಕೆಯನ್ನು ನಾವು ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಹಳಷ್ಟು ಜನ ಮಾತನಾಡುತ್ತಾರೆ. ಪ್ರತಿಯೊಂದು ಹೇಳಿಕೆಗೆ ಉತ್ತರ ಕೊಡಲು ಹೋದರೆ ಸಮಯ ಸಾಲುವುದಿಲ್ಲ ಎಂದರು.ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಬಳಿಕ ಗಲಾಟೆ ಆಗಿದೆ. ಇಂತಹ ಘಟನೆಗಳು ಆಗಬಾರದು. ಕರ್ನಾಟಕದಲ್ಲಿ ಇಂತಹ ಘಟನೆಗಳು ಹಿಂದೆ ನಡೆದಿರಲಿಲ್ಲ. ಈಗ ನಡೆದಿದೆ. ಬೇರೆ ರಾಜ್ಯಗಳಲ್ಲಿ ಈ ರೀತಿಯ ಗೊಂದಲಗಳು ಆಗಿವೆ. ಆದರೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎರಡು ಕಡೆಯವರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ತಿಳಿಸಿದರು.ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಇದರಿಂದಾಗಿ, ಬೆಳಗಾವಿಗೆ ಮಾತ್ರವಲ್ಲ, ರಾಜ್ಯಕ್ಕೆ ಒಟ್ಟಾರೆ ಶುಭ ಸುದ್ದಿ ಸಿಗಲಿದೆ. ರಾಜ್ಯದಲ್ಲಿ ಈಗಾಗಲೇ ಬಹಳಷ್ಟು ಅಭಿವೃದ್ಧಿ ಕೆಲಸಗಳು ಪೆಂಡಿಂಗ್‌ನಲ್ಲಿದ್ದು, ಅವುಗಳಲ್ಲಿ ಸುಮಾರು ಶೇ.80 ಕಾಮಗಾರಿಗಳು ಪೂರ್ಣ ಹಂತಕ್ಕೆ ಬಂದಿವೆ. ಈ ಯೋಜನೆಗಳು ಮುಗಿದ ನಂತರ ಹೊಸ ಕಾರ್ಯಕ್ರಮಗಳು ಹಾಗೂ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.