ಕುಷ್ಟಗಿ: ತಂಬಾಕು ಸೇವನೆ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೇ ಕುಟುಂಬ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ. ಯುವಜನರು ಹಾಗೂ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚವಲಗಿ ಹೇಳಿದರು.

ಪಟ್ಟಣದ ತಾಲೂಕಾಸ್ಪತ್ರೆಯ ಆವರಣದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಗುಟಕಾ, ಸಿಗರೇಟ್ ಸೇವನೆಯಂತಹ ಚಟಕ್ಕೆ ಬಲಿಯಾಗುತ್ತಿದ್ದು, ಪಾಲಕರು ಹಾಗೂ ಪೋಷಕರು ಇದರ ತಡೆಗೆ ಮುಂದಾಗಬೇಕು, ಧೂಮಪಾನದಿಂದ ಕ್ಯಾನ್ಸರ್ ಬರುತ್ತದೆ. ಆದ ಕಾರಣ ಮಕ್ಕಳನ್ನು ಧೂಮಪಾನ, ಗುಟ್ಕಾ, ಮದ್ಯ ವ್ಯಸನಿಗಳಾಗದಂತೆ ನೋಡಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರು ಮಾತನಾಡಿ, ತಂಬಾಕು ಸೇವನೆ ದುಷ್ಪರಿಣಾಮ ಕುಟುಂಬಗಳು ಬೀದಿಗೆ ಬಂದ ಸನ್ನಿವೇಶಗಳು ನಡೆದಿವೆ. ಜನರು ಜಾಗೃತಿ ಪಡೆದುಕೊಂಡು ತಂಬಾಕು ಸೇವನೆ ಬಿಡಬೇಕು. ತಂಬಾಕು ಸೇವನೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ತೊಂದರೆ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಸರ್ಕಾರದ ತಂಬಾಕು ನಿಯಂತ್ರಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್‌.ಆರ್‌.ನಾಯಕ, ಕಾರ್ಯದರ್ಶಿ ಶಶಿಧರ ಶೆಟ್ಟರ, ಇಂದಿರಾ ಸುಹಾಸಿನಿ, ವೈದ್ಯಾಧಿಕಾರಿ ಡಾ. ಚಂದ್ರಕಲಾ, ಡಾ. ಶ್ರೀವಿದ್ಯಾ, ಡಾ. ಶ್ರೀ ವರ್ಷ, ಪ್ರಯೋಗಾಲಯ ತಜ್ಞ ಬಾಲಾಜಿ ಬಳಿಗಾರ, ಮರಿಶಾಂತವೀರ, ಚಂದ್ರು ಪುರದ, ಬಸವರಾಜ, ಪ್ರಕಾಶ ಗುತ್ತೇದಾರ, ಚನ್ನಬಸಪ್ಪ, ಶಿಲ್ಪಾ ಸೇರಿದಂತೆ ಅನೇಕರು ಇದ್ದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಮುಂದಾದರು.