ಉತ್ತಮ ಸಮಾಜ, ಸದೃಢ ದೇಶ ಕಟ್ಟಲು ಪ್ರತಿಯೊಬ್ಬರು ತಂಬಾಕು ತ್ಯಜಿಸಬೇಕು. ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಉತ್ತಮ ಸಮಾಜ, ಸದೃಢ ದೇಶ ಕಟ್ಟಲು ಪ್ರತಿಯೊಬ್ಬರು ತಂಬಾಕು ತ್ಯಜಿಸಬೇಕು. ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ತಿಳಿಸಿದರು.ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್‌ಪೋರ್ಸ್ ಮೆಂಟ್ ವಿಭಾಗದ ವತಿಯಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಟಾ-2003ರ ಕಾಯ್ದೆ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಟ್ಪಾ ಕಾಯ್ದೆ ಉಲ್ಲಂಘನೆಗಳ ಮೇಲ್ವಿಚಾರಣೆ ಬಗ್ಗೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಈ ಬಗ್ಗೆ ಪ್ರತಿ ದಿನ ಮಾಹಿತಿ ಪಡೆಯಲಾಗುತ್ತಿದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಹಾಗೂ ಸದೃಢ ದೇಶ ಕಟ್ಟಲು ತಂಬಾಕು ತ್ಯಜಿಸುವುದು ಅನಿವಾರ್ಯವಾಗಿದೆ. ಅಲ್ಲದೇ ತಂಬಾಕು ದುಷ್ಪರಿಣಾಮಗಳ ಬಗ್ಗೆ ನಿರಂತರ ಜಾಗೃತಿ ಅಗತ್ಯವಾಗಿದೆ. ಮೊದಲು ನಾವು ತಂಬಾಕು ತ್ಯಜಿಸಲು ಸಿದ್ಧ ಹಾಗೂ ಬದ್ಧರಿರಬೇಕು. ಬಳಿಕ ಈ ಬಗ್ಗೆ ಇತರರಿಗೂ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಮಾತನಾಡಿ, ಮಾದಕ ವಸ್ತುಗಳಲ್ಲಿ ತಂಬಾಕು ಮನರಂಜನಾ ಉತ್ಪನ್ನವಾಗಿದ್ದು, ತಂಬಾಕು ಸೇವನೆಯು ವ್ಯಕ್ತಿಯ ಮೆದುಳನ್ನು ಪ್ರಚೋದಿಸುವುದರಿಂದ ಜನರು ಹೆಚ್ಚು ಹೆಚ್ಚು ಸೇವನೆಗೆ ಒಳಗಾಗುತ್ತಾರೆ. ಇದನ್ನು ನಾನಾ ಬಗೆಗಳಲ್ಲಿ ಉಪಯೋಗಿಸುತ್ತಾರೆ. ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಸಿಗಾರ್, ಹುಕ್ಕಾ, ವಿಮಲ್ ಪಾನ್ ಮಸಾಲ, ಆರ್.ಎಂ.ಡಿ ಹಾಗೂ ನಶ್ಯ ಸೇವನೆ ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಬೀಡಿ, ಸಿಗರೇಟನ್ನು ಸುಟ್ಟಾಗ ಸುಮಾರು 4800 ರಾಸಾಯನಿಕಗಳು ಹೊರ ಬರುತ್ತದೆ. ಅದರಲ್ಲಿ ಹೆಚ್ಚಿನ ರಾಸಾಯನಿಕಗಳು ಕ್ಯಾನ್ಸರ್ ಖಾಯಿಲೆಗಳನ್ನು ತರುವ ಅಂಶಗಳನ್ನು ಒಳಗೊಂಡಿರುತ್ತದೆ. ನಮ್ಮ ದೇಹದಲ್ಲಿ ತಲೆ ಕೂದಲು ಹಾಗೂ ಕೈ ಕಾಲಿನ ಉಗುರುಗಳು ಬಿಟ್ಟರೆ ಇನ್ನೆಲ್ಲಾ ಅಂಗಗಳನ್ನು ತಲುಪುತ್ತಿದೆ. ಇದರಿಂದಾಗಿ ಪ್ರತಿ ವರ್ಷವು 10 ಲಕ್ಷಕ್ಕೂ ಹೆಚ್ಚು ಜನ ನಿಧನರಾಗುತ್ತಿದ್ದಾರೆ. ಪ್ರಮುಖವಾಗಿ ಹೆಚ್ಚಿನವರು ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ. ತಂಬಾಕು ಸೇವನೆಯನ್ನು ಸಾಮುದಾಯಿಕವಾಗಿ ತಡೆಯಲು ಪ್ರತಿ ಮನೆಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ತಂಬಾಕನ್ನು ಸ್ವಯಂ ನಿಷೇಧಿಸುವುದು ಅಗತ್ಯವಾಗಿದೆ. ತಂಬಾಕು ಮುಕ್ತ ಬೀದಿ, ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಡಾ. ಚಿದಂಬರ ಅವರು ತಿಳಿಸಿದರು.ತರಬೇತಿ ಕಾರ್ಯಕ್ರಮಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಭೋಧನ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಡಾ. ದರ್ಶನ್ ಹಾಗೂ ಡಾ. ವಾಸೀಮ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಜಿಲ್ಲಾ ಎನ್‌ಪೋರ್ಸ್ ಮೆಂಟ್ ಅಧಿಕಾರಿ ಡಾ. ಅಂಕಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಜಿಲ್ಲಾ ಸಲಹೆಗಾರರಾದ ಪ್ರಶಾಂತ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.