ಕನ್ನಡ ಭಾಷಾ ವೈಶಿಷ್ಟ್ಯತೆ ತಿಳಿದುಕೊಳ್ಳಲು ಶಾಲಾ ಮಕ್ಕಳಿಗೆ ರಸಪ್ರಶ್ನೆ: ಮೀರಾ ಶಿವಲಿಂಗಯ್ಯ

| Published : Dec 10 2024, 12:31 AM IST

ಕನ್ನಡ ಭಾಷಾ ವೈಶಿಷ್ಟ್ಯತೆ ತಿಳಿದುಕೊಳ್ಳಲು ಶಾಲಾ ಮಕ್ಕಳಿಗೆ ರಸಪ್ರಶ್ನೆ: ಮೀರಾ ಶಿವಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ತಜ್ಞರ ಮೂಲಕ ವಿಚಾರಗೋಷ್ಠಿ ಆಯೋಜಿಸಲಾಗಿದೆ. ಕನ್ನಡ ನೆಲ, ಜಲ, ಹೆಣ್ಣು ಭ್ರೂಣ ಹತ್ಯೆಗಳು ಹಾಗೂ ಮುಂತಾದ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದು ಸಾಹಿತ್ಯ ಸಮ್ಮೇಳನದ ಆಶಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಗತ್ತಿನ ಪರಿಪೂರ್ಣ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳಲು ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಚಾರ ಸಮಿತಿಯಿಂದ ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಮತ್ತು ವಿಶೇಷವಾಗಿ ಮಂಡ್ಯ ಜಿಲ್ಲಾ ಸಾಹಿತ್ಯ ಇತಿಹಾಸ ವೈಶಿಷ್ಟ್ಯಗಳ ಕುರಿತು ಹಮ್ಮಿಕೊಂಡಿರುವ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲಿ ನಾವು ಕನ್ನಡ ಪ್ರಜ್ಞೆ, ಕನ್ನಡ ಪ್ರೇಮವನ್ನು ಜಾಗೃತಿಗೊಳಿಸಬೇಕು. ಕನ್ನಡ ಭಾಷೆ ಮೂಲವನ್ನು ತಿಳಿದು ಭಾಷೆಯನ್ನು ಹೇಗೆ ಬೆಳೆಸಬಹುದು ಎಂಬುದರ ಬಗ್ಗೆ ನಮ್ಮ ಚಿತ್ತ ಹರಿಸಬೇಕು ಎಂದರು.

ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ತಜ್ಞರ ಮೂಲಕ ವಿಚಾರಗೋಷ್ಠಿ ಆಯೋಜಿಸಲಾಗಿದೆ. ಕನ್ನಡ ನೆಲ, ಜಲ, ಹೆಣ್ಣು ಭ್ರೂಣ ಹತ್ಯೆಗಳು ಹಾಗೂ ಮುಂತಾದ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದು ಸಾಹಿತ್ಯ ಸಮ್ಮೇಳನದ ಆಶಯವಾಗಿದೆ ಎಂದರು.

ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಸಾಂಸ್ಕೃತಿಕ ಕಲಾ ತಂಡಗಳಿಂದ ಕಲೆ ಪ್ರದರ್ಶನ ಇರುವುದರಿಂದ ಪ್ರತಿಯೊಬ್ಬರೂ ಪೋಷಕರೊಡನೆ ಬಂದು ಕಲೆಗಳ ಪ್ರಕಾರವನ್ನು ತಿಳಿದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಜಿಲ್ಲೆಯಲ್ಲಿ ಮೂರು ದಿನ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡ ಭಾಷೆ ಅಭಿವೃದ್ಧಿ ಹಾಗೂ ಸಾಹಿತ್ಯದ ಬೆಳವಣಿಗೆಯ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಜೊತೆಗೆ ಕನ್ನಡ ನಾಡು ನುಡಿಯ ಬಗ್ಗೆ ಎಷ್ಟು ಜ್ಞಾನ ಹೊಂದಿದ್ದಾರೆ ಎಂಬುದನ್ನು ತಿಳಿಯಲು ರಸ ಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಪಠ್ಯ ವಿಷಯದ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಈ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಐತಿಹಾಸಿಕ ದಾಖಲೆ ಆಗಬೇಕು. ಜಿಲ್ಲೆಯಲ್ಲಿ 522 ಪ್ರೌಢಶಾಲೆಗಳಿಂದ ಸುಮಾರು 68,865 ಮಕ್ಕಳಿದ್ದು, ಎಲ್ಲಾ ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಪ್ರಶ್ನೆ ಪತ್ರಿಕೆಯಲ್ಲಿ 87 ಪ್ರಶ್ನೆಗಳಿವೆ. ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ. ಮಕ್ಕಳಿಗೆ ನಾಡು-ನುಡಿ ಬಗ್ಗೆ ಅರಿವು ಮತ್ತು ಜಾಗೃತಿ ನೀಡುವುದರ ಜೊತೆಗೆ ಜಿಲ್ಲೆಯ ಸುಮಾರು 68,000 ಕುಟುಂಬಗಳಿಗೆ ಸಮ್ಮೇಳನದ ಆಹ್ವಾನವು ತಲುಪುತ್ತದೆ ಎಂದರು.

ಪರೀಕ್ಷೆ ಮೊದಲು ಶಾಲಾ ಹಂತದಲ್ಲಿ ಜಿಲ್ಲಾದ್ಯಂತ ಏಕಕಾಲಕ್ಕೆ ನಡೆಯಲಿದೆ. ನಂತರ ಪ್ರತಿ ಶಾಲೆಯಿಂದ ವಿಜೇತ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ತಾಲೂಕು ಹಂತದಲ್ಲಿ ಸ್ಪರ್ಧೆ ನಡೆಸಲಾಗುವುದು. ತಾಲೂಕು ಹಂತದಲ್ಲಿ ಆಯ್ಕೆಗೊಂಡ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದರು.

ತಾಲೂಕು ಹಂತದಲ್ಲಿ ಪ್ರತಿ ತಾಲೂಕಿನಿಂದ ಮೂರು ಮಕ್ಕಳನ್ನು ಆಯ್ಕೆ ಮಾಡಿ ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಜಿಲ್ಲಾ ಹಂತದಲ್ಲಿ ಆಯ್ಕೆಗೊಂಡ ಮೂರು ಮಕ್ಕಳಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದರು.

ಡಿಸೆಂಬರ್ 10ರಂದು ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಪ್ರೌಢಶಾಲಾ ಮಾದರಿಯಲ್ಲೇ ಜಿಲ್ಲಾದ್ಯಂತ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಜಿಲ್ಲೆಯಲ್ಲಿ ಸುಮಾರು 157 ಪದವಿ ಪೂರ್ವ ಕಾಲೇಜಿಗಳಿದ್ದು ಅದರಲ್ಲಿ ಸುಮಾರು 28,000 ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾಲೇಜು, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಆಯ್ಕೆಗೊಂಡ ವಿಜೇತ ಮಕ್ಕಳಿಗೆ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಮೆಲ್ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಗ್ಲಾಡಿಸ್ ಕಾಸ್ಟಲಿನೋ, ಮುಖ್ಯೋಪಾಧ್ಯಾಯರು ಸಿಸ್ಟರ್ ಮೇರಿ ಪೌಲಿನೆ, ಬಿಇಒ ಮಹದೇವು, ಕಸಾಪ ಮಾಜಿ ಅಧ್ಯಕ್ಷ ಹಾಗೂ ಪ್ರಶ್ನೆ ಪತ್ರಿಕೆ ತಯಾರಕ ಮಹೇಶ್, ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಪದಾಧಿಕಾರಿಗಳು ಡಾ.ಹುಸ್ಕೂರು ಕೃಷ್ಣೆಗೌಡ, ಚಂದ್ರಲಿಂಗು, ಈವೆಂಟ್ಸ್ ಅಧ್ಯಕ್ಷ ಸಬ್ಬನಹಳ್ಳಿ ಶಶಿಧರ, ಪ್ರಚಾರ ಸಮಿತಿ ಸದಸ್ಯರುಗಳಾದ ಕಬ್ಬನಹಳ್ಳಿ ಶಂಭು, ಎಂ.ಮಂಚಶೆಟ್ಟಿ ಉಪಸ್ಥಿತರಿದ್ದರು.